

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ವೈದ್ಯಕಿಯ ಮಹಾವಿದ್ಯಾಲಯ (ಜೆಜಿಎಂಎಂ) ಮತ್ತು ಕೆಎಲ್ಇ ಹುಬ್ಬಳ್ಳಿ ಕೋ&-ಅಪರೇಟಿವ್ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ತಾಲೂಕಿನ ನೂಲ್ವಿ ಗ್ರಾಮದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರೌಢಶಾಲೆಯಲ್ಲಿ ಭಾನುವಾರ ಬೃಹತ್ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಎಸ್.ಜೆ.ಆರ್. ಶಿಕ್ಷಣ ಸಂಸ್ಥೆಯ ನಿರ್ದೇಶಕ, ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ ಶಿಬಿರ ಉದ್ಘಾಟಿಸಿ ಮಾತನಾಡಿ, ಕೆಎಲ್ಇ ಸಂಸ್ಥೆಯ ಆಸ್ಪತ್ರೆಯಿಂದ ಹಮ್ಮಿಕೊಂಡಿರುವ ಉಚಿತ ತಪಾಸಣೆ ಶಿಬಿರದಲ್ಲಿ ವಿದ್ಯಾಥಿರ್ಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಶಿಬಿರದ ಸದುಪಯೋಗ ಪಡೆದುಕೊಳ್ಳಲು ಜನರಲ್ಲಿ ಮನವಿ ಮಾಡಿದರು.
ನೂಲ್ವಿ ಗ್ರಾಮ ಪಂಚಾಯತಿ ಅಧ್ಯೆ ಸವಿತಾ ಮಲ್ಲಿಕಾರ್ಜುನ ತೆಂಬದಮನಿ, ಉಪಾಧ್ಯಕ್ಷ ಅಶೋಕ ಭೀಮಪ್ಪ ಬುಳ್ಳಣ್ಣವರ, ಇತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜೆಜಿಎಂಎಂ ವೈದ್ಯಕಿಯ ಮಹಾವಿದ್ಯಾಲಯ ಪ್ರಾಂಶುಪಾಲ ಎಂ.ಜಿ. ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕೆಂದು ತಿಳಿಸಿದರು.
ಕೆಎಲ್ಇ ಆಸ್ಪತ್ರೆಯ 20ಕ್ಕೂ ಹೆಚ್ಚು ನುರಿತ ವೈದ್ಯರ ತಂಡ ಸ್ತ್ರೀ ರೋಗ ಹಾಗೂ ಪ್ರಸೂತಿ ಸಮಸ್ಯೆ, ಕಣ್ಣಿನ ತೊಂದರೆಗಳಿಗೆ, ಎಲುಬು ಕೀಲಿನ ಸಮಸ್ಯೆ, ಚಿಕ್ಕ ಮಕ್ಕಳ ಆರೋಗ್ಯ ಸಮಸ್ಯೆ ಹೀಗೆ ಹಲವಾರು ಆರೋಗ್ಯದ ತೊಂದರೆಗಳಿಗೆ ಉಚಿತ ಚಿಕಿತ್ಸೆ ನೀಡಿದರು. ಉಚಿತ ಔಷಧಿಯನ್ನು ವಿತರಣೆ ಮಾಡಲಾಯಿತು.
ಶಿಬಿರದಲ್ಲಿ ನೂಲ್ವಿ, ಶೇರೆವಾಡ ಮತ್ತು ಅದರಗುಂಚಿ ಗ್ರಾಮಗಳ 560ಕ್ಕಿಂತ ಹೆಚ್ಚು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.