ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

9KMD-1
Published on

ಕೆ.ಎಂ.ದೊಡ್ಡಿ : ನಾವು ತಿನ್ನುವ ಆಹಾರ ಸಿದ್ಧಪಡಿಸುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದು ಹೆಚ್ಚಾಗಿರುವ ಕಾರಣಮಾರಕ ಕಾಯಿಲೆಗಳಿಗೆ ತುತ್ತಾಗುವ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಆಸ್ಟರ್ ಜಿ. ಮಾದೇಗೌಡ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಪಿ.ಎಸ್. ಗಣೇಶ ಪ್ರಭು ಆತಂಕ ವ್ಯಕ್ತಪಡಿಸಿದರು.

ಸಮೀಪದ ಹನುಮಂತನಗರದಲ್ಲಿ ಆಸ್ಟರ್ ಜಿ. ಮಾದೇಗೌಡ ಆಸ್ಪತ್ರೆ, ಭಾರತಿ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ ಸಹಯೋಗದೊಂದಿಗೆ ‘ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯ ಸಂಗ್ರಹಣೆ,

ಸಸಿ ನೆಡುವ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಹೋಟೆಲ್‌ಗಳಲ್ಲಿ ಇಡ್ಲಿಯನ್ನು ಬೇಯಿಸುವಾಗ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳು ಬರಲಿವೆ. ಆಹಾರ ಇಲಾಖೆಗೆ ಇವೆಲ್ಲವೂ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಹೋಟೆಲ್‌ಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಸ್ಥಳೀಯ ಗ್ರಾಪಂಗಳು ಈ ವಿಷಯಕ್ಕೂ, ನಮಗೂ ಸಂಬಂಧ ಇಲ್ಲ ಎಂಬಂತೆ ಸುಮ್ಮನಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಎಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ ಸ್ಥಳೀಯ ಆಡಳಿತ ಈ ಬಗ್ಗೆ ಸ್ಪಂದನೆ ಹೊಂದಿಲ್ಲ. ಇದು ಜನರ ಅನಾರೋಗ್ಯಕ್ಕೆ ಮೂಲವಾಗಿದೆ. ಟೀ, ಕಾಫಿಯನ್ನೂ ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸಲ್ ನೀಡುವ ಪರಿಪಾಠ ಹೆಚ್ಚಾಗುತ್ತಿದೆ. ಈ ಬಗ್ಗೆ ಗ್ರಾಹಕರೇ ಜಾಗೃತರಾಗಬೇಕಿದೆ ಎಂದರು.

ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಪ್ರಾಂಶುಪಾಲ ಡಾ. ಶಾಂತಕುಮಾರ್, ಆಸ್ಪತ್ರೆಯ ಮಾರುಕಟ್ಟೆ ವ್ಯವಸ್ಥಾಪಕ ಅನಿಲ್ ಕುಮಾರ್, ಎಚ್ ಆರ್ ವಿಭಾಗದ ಲಕ್ಷ್ಮೀಶ, ರಾಘವೇಂದ್ರ, ಮಧುಕುಮಾರ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net