ಹೈನುಗಾರಿಕೆಯಲ್ಲಿ ವೈಜ್ಞಾನಿಕತೆ ಇರಲಿ

pashu
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ದೇವನಹಳ್ಳಿಯ ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಸಲಹೆ ನೀಡಿದರು.

ಜಿಲ್ಲಾ ಪಶುಪಾಲನಾ ಇಲಾಖೆ, ದೇವನಹಳ್ಳಿ ಹಾಲು ಉತ್ಪಾದಕರ ಸಂಘ ಹಾಗೂ ಲಯ್ಸನ್ ಕ್ಲಬ್ ವತಿಯಿಂದ  ದೇವನಹಳ್ಳಿ ತಾಲೂಕು ಕೊಡಗುರ್ಕಿ ವ್ಯಾಪ್ತಿಯ ತೈಲಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನುವಾರು ಆರೋಗ್ಯ ಶಿಬಿರ ಹಾಗೂ ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪಕಸುಬು ಎನಿಸಿದ್ದ ಹೈನುಗಾರಿಕೆ ಪ್ರಸ್ತುತ ದಿನಗಳಲ್ಲಿ ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದೆ, ರೈತಾಪಿ ಜನರ ಆರ್ಥಿಕ ಸಬಲತೆಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸಿದೆ ಎಂದರು. ಪಶುಪಾಲನಾ ಇಲಾಖೆಯಿಂದ ಹೈನುಗಾರರಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ, ಅನೇಕ ನವೀನ ಮಾದರಿಯ ತಾಂತ್ರಿಕತೆ ಪರಿಚಯಿಸಲಾಗಿದೆ, ಇವುಗಳ ಬಗ್ಗೆ ಮಾಹಿತಿ ಪಡೆದು ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಲಸಿಕೆ ಕಡ್ಡಾಯವಾಗಿ ಹಾಕಿಸಿ: ಜಿಲ್ಲೆಯಲ್ಲಿ ಈಗಾಗಲೇ ಅನೇಕ ಸುತ್ತಿನಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗಿದೆ, ಈಗಲೂ 6ನೇ ಸುತ್ತಿನ ಕಾಲುಬಾಯಿ ಲಸಿಕಾ ಆಂದೋಲನ ನಡೆಯುತ್ತಿದ್ದು, ರೈತರು ತಪ್ಪದೆ ರಾಸುಗಳಿಗೆ ಲಸಿಕೆ ಹಾಕಿಸಬೇಕು ಎಂದು ದೇವನಹಳ್ಳಿ ಪಶು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಹೇಳಿದರು. ಆಕಳುಗಳಿಗೆ ಜನಿಸುವ ಗಂಡು ಕರುವಿನ ಮೇಲೆ ಮಾಲೀಕರ ನಿರ್ಲಕ್ಷ್ಯ, ತಾತ್ಸಾರ ಮನೋಭಾವನೆ ತಪ್ಪಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಹೆಣ್ಣು ಕರು ಖಾತರಿ ಯೋಜನೆ ಹೈನುಗಾರರಿಗೆ ವರದಾನವಾಗಿದೆ. ನಳಿಕೆಯನ್ನು ನೀಡಿದ ಹಸು ಕೃತಕವಾಗಿ ಗರ್ಭ ಧರಿಸುವ ಜತೆಗೆ ಶೇ.90 ಖಚಿತವಾಗಿ ಹೆಣ್ಣು ಕರುವಿಗೆ ಜನ್ಮ ನೀಡುತ್ತದೆ. ಹಲವಾರು ಪ್ರಯೋಗಗಳ ಮೂಲಕ ವಿರ್ಯದ ನಳಿಕೆ ಸಿದ್ಧಪಡಿಸಲಾಗಿದ್ದು, ನಳಿಕೆ ಮೂಲಕ ಗರ್ಭ ಧರಿಸುವ ಹಸುಗಳು ಹೆಣ್ಣು ಕರುವಿಗೆ ಜನ್ಮ ನೀಡಿರುವ ಸಾಕಷ್ಟು ನಿದರ್ಶನಗಳಿವೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೆ ಅಭಿವೃದ್ಧಿಪಡಿಸಲಾದ ವಿರ್ಯ ನಳಿಕೆಗಳು ಪೂರೈಕೆಯಾಗಿವೆ ಎಂದರು. ಮಿಶ್ರತಳಿ ಕರುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದು ಹೈನುಗಾರರಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದರು.

ಸಮತೋಲನ ಆಹಾರ ನೀಡಿ: ರಾಸುಗಳಿಗೆ ಮುಖ್ಯವಾಗಿ ಸಮತೋಲನ ಆಹಾರ ನೀಡಬೇಕು, ಇದರಿಂದ ಗುಣಮಟ್ಟದ ಹಾಗೂ ಹೆಚ್ಚಿನ ಹಾಲು ಪಡೆಯಲು ಸಾಧ್ಯ ಎಂದು ಹಿರಿಯ ಪಶುವೈದ್ಯಾಧಿಕಾರಿ ಡಾ.ಕಾಂತರಾಜು ತಿಳಿಸಿದರು. ಜಾನುವಾರುಗಳಿಗೆ ತಗಲುವ ಪ್ರಾಣಿಜನ್ಯ ಸೋಂಕುಗಳ ಬಗ್ಗೆ ನಿಗಾವಹಿಸಬೇಕು, ಯಾವುದೇ ರೋಗ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು ಕೂಡಲೇ ಪಶುವೈದ್ಯರಿಂದ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.

 ಪ್ರದರ್ಶನದಲ್ಲಿ 50 ಕರು ಭಾಗಿ: ತೈಲಗೆರೆಯಲ್ಲಿ ಹಮ್ಮಿಕೊಂಡಿದ್ದ ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ ವಿವಿಧ ವಯೋಮಾನದ 50 ಮಿಶ್ರತಳಿ ಕರುಗಳು ಭಾಗವಹಿಸಿದ್ದವು. ಈ ವೇಳೆ ಕರುಗಳ ಬೆಳವಣಿಗೆ, ತಳಿ ಹಾಗೂ ಗುಣಲಕ್ಷಣದ ಆಧಾರದ ಮೇಲೆ ತೀರ್ಪುಗಾರರು ಕೆಲವು ಕರುಗಳಿಗೆ ಬಹುಮಾನ ೋಷಿಸಿದರು. ಬಹುಮಾನದ ಜತೆಗೆ ಪ್ರಮಾಣಪತ್ರ ನೀಡಿ ಹೈನುಗಾರರನ್ನು ಇಲಾಖೆ ವತಿಯಿಂದ ಅಭಿನಂದಿಸಲಾಯಿತು. ಮಿಶ್ರತಳಿ ಹೆಣ್ಣು ಕರುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಆರೋಗ್ಯ ತಪಾಸಣೆ ಜತೆಗೆ ಜಂತುಹುಳು ನಾಶಕ ಔಷಧಿಗಳನ್ನು ನೀಡಲಾಯಿತು. ರೈತರಿಗೆ ಖನಿಜಮಿಶ್ರಿಣ ಪೊಟ್ಟಗಳನ್ನು ವಿತರಿಸಲಾಯಿತು. ಹೈನುಗಾರರೊಂದಿಗೆ ಅಧಿಕಾರಿಗಳು ಸಂವಾದ ನಡೆಸಿದರು. ಈ ವೇಳೆ ಜಾನುವಾರುಗಳಿಗೆ ಹರಡುವ ರೋಗ, ಅವುಗಳ ರಕ್ಷಣೆ, ಲಸಿಕಾ ಕ್ರಮ ಮತ್ತಿತರ ವಿಷಯಗಳ ಬಗ್ಗೆ ಅಧಿಕಾರಿಗಳು ಹೈನುಗಾರರಿಗೆ ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆ ವತಿಯಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ವೈದ್ಯಾಧಿಕಾರಿಗಳು ತಿಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net