

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಯಾಂತ್ರಿಕ ಜೀವನದ ನಡುವೆ ಆರೋಗ್ಯದ ಬಗ್ಗೆ ಹೆಚ್ಚಿನ ಮಂದಿ ನಿಗಾ ವಹಿಸುವುದಿಲ್ಲ, ಇದರಿಂದ ನಾನಾ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುವ ಸನ್ನಿವೇಶಗಳು ಕಂಡುಬರುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ನಟರಾಜ್ ಹೇಳಿದರು.
ಜಡಿಗೇನಹಳ್ಳಿ ಹೋಬಳಿ ತಗ್ಗಲಿಹೊಸಹಳ್ಳಿಯಲ್ಲಿ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ದಿ.ನಂಜಮ್ಮ, ಸಲ್ಲಾಪುರಪ್ಪ ಸ್ಮರಣಾರ್ಥ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಎಲ್ಲ ವಯೋಮಾನದವರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ತೀವ್ರತೆಯನ್ನು ಪ್ರಾಥಮಿಕ ಹಂತದಲ್ಲೇ ಗುಣಪಡಿಸಲು ಸಾಧ್ಯವಾಗಲಿದೆ ಆದ್ದರಿಂದ ಪ್ರತಿಯೊಬ್ಬರು ಆಗಾಗ ಪ್ರಾಥಮಿಕವಾದರೂ ಆರೋಗ್ಯ ತಪಾಸಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆ ಸಹಯೋಗದಲ್ಲಿ ಗ್ರಾಮಗಳಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ಚಿಂತಿಸಲಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಿಬಿರದ ಮುಖ್ಯಸ್ಥ ಶಿವಾನಂದ್ ಹೇಳಿದರು.
ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಇಂಥ ಆರೋಗ್ಯ ತಪಾಸಣಾ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಗ್ರಾಪಂ ಸದಸ್ಯ ರಾಮಣ್ಣ ಹೇಳಿದರು. ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಗ್ರಾಮೀಣ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಇದರಿಂದ ರೋಗಗಳು ಉಲ್ಬಣಗೊಂಡ ಬಳಿಕ ಎಚ್ಚೆತ್ತುಕೊಂಡರೆ ಪ್ರಯೋಜವಾಗುವುದಿಲ್ಲ. ಪ್ರಾಥಮಿಕ ಹಂತದಲ್ಲೇ ರೋಗಗಳಿಗೆ ಚಿಕಿತ್ಸೆ ದೊರಕಬೇಕು ಆದ್ದರಿಂದ ಪ್ರತಿಯೊಬ್ಬರು ಇಂಥ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ನೂರಾರು ಮಂದಿಗೆ ತಪಾಸಣೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಮಧುಮೇಹ, ಸಕ್ಕರೆ ಕಾಯಿಲೆಯಂತ ರೋಗಿಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಔಷಧಿಗಳನ್ನು ವಿತರಿಸಲಾಯಿತು. ಇನ್ನಿತರ ಕಾಯಿಲೆಗಳ ಲಕ್ಷಣ ಕಂಡುಬಂದವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದರು. ಕಣ್ಣಿನ ದೋಷ ಇರುವರಿಗೆ ತಪಾಸಣೆ ನಡೆಸಿ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣಿನ ತಪಾಸಣೆ, ದಂತ ತಪಾಸಣೆ ಸೇರಿ ಮತ್ತಿತರ ಆರೋಗ್ಯ ತಪಾಸಣೆ ನಡೆಯಿತು.