

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿದೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ, ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವನಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಸುನಿಲ್ ತಿಳಿಸಿದರು.
ದೇವನಹಳ್ಳಿ ತಾಲೂಕು ಸೋಮತ್ತನಹಳ್ಳಿಯಲ್ಲಿ ಹೆಡ್ಸ್ ವಿಪ್ರೋ ಕೇರ್ ಹಾಗೂ ಸಮುದಾಯ ಆರೋಗ್ಯ ಸುರಕ್ಷಾ ಯೋಜನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಕರೊನಾ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಉಚಿತ ಆರೋಗ್ಯ ಶಿಬಿರವನ್ನು ಪ್ರತಿ ತಿಂಗಳು ಆಯೋಜನೆ ಮಾಡುವ ಉದ್ದೇಶವಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಶಿಬಿರ ಸಹಕಾರಿಯಾಗಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚು ನಡೆಯಬೇಕು. ಇದರಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.
ಹೆಡ್ಸ್ ವಿಪ್ರೋ ಕೇರ್‌ನ ಡಾ.ನಾಗೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವನ ಶೈಲಿ ಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದರು.
ಹೆಡ್ಸ್ ವಿಪ್ರೋ ಕೇರ್‌ನ ವಿಜಯಕುಮಾರ್ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಸಾಮಾನ್ಯ ಜನತೆಗೆ ಇಂತಹ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ವೈದ್ಯ ವೃಂದವು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಈ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೌಲಭ್ಯಗಳಿವೆ ಎಂದರು.
ಮುಖಂಡರಾದ ಸುಬ್ರಮಣಿ, ಮೂರ್ತಿ, ನಾಗಪ್ಪ, ಚಂದ್ರಶೇಖರ್, ಸಿಬ್ಬಂದಿ ಲತಾ, ವಿದ್ಯಾ, ಮಧು ಮತ್ತಿತರರು ಇದ್ದರು.