ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ

08 HRS 01
Published on

ಹಿರೀಸಾವೆ : ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರು ಆರೋಗ್ಯದ ಕಡೆಗೂ ಸಾಕಷ್ಟು ಗಮನ ಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ಹೇಳಿದರು.
ಹೋಬಳಿಯ ಉಳ್ಳಾವಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಎಚ್‌ಪಿಟಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಅಮೃತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಗಲಿರುಳು ಬೆವರು ಸುರಿಸಿ ಅನ್ನ ಕೊಡುವ ರೈತವರ್ಗ ಆರೋಗ್ಯದಿಂದ ಇದ್ದರೆ ಮಾತ್ರ ದೇಶ ಸಮೃದ್ಧಿಯಾಗಿರಲು ಸಾಧ್ಯ. ಆದರೆ ರೈತರು ಕೃಷಿ ಕಾರ್ಯದಲ್ಲಿ ತೊಡಗುವ ಭರದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಹಾಗೂ ನಿದ್ರೆ ಮಾಡುತ್ತಿಲ್ಲ ಎಂದರು.
ಅಭಿಯಾನದಲ್ಲಿ 120 ಕ್ಕೂ ಹೆಚ್ಚು ಜನರ ರಕ್ತದೊತ್ತಡ, ಮಧುಮೇಹ ಹಾಗೂ ವಿವಿಧ ಪರೀಕ್ಷೆಗೆ ಒಳಪಟ್ಟಿದ್ದು 88 ಜನ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಮಾಡಿಸಿಕೊಂಡರು. ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ಆಶಾ ಕಾರ್ಯಕರ್ತೆ ಅನುಸೂಯ, ದಿಡಗ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಕೃಷ್ಣೇಗೌಡ, ನೀರುಗಂಟಿ ದಿಲೀಪ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net