ರಕ್ತದಾನದಿಂದ ಆರೋಗ್ಯ ಭಾಗ್ಯ : ಡಾ.ಈ.ಸಿ.ನಿಂಗರಾಜ್‌ಗೌಡ

1
Published on

ಅನ್ನದಾನ, ವಿದ್ಯಾದಾನದಂತೆಯೇ ರಕ್ತದಾನ ಮಾಡುವುದು ಕೂಡ ಇಂದಿನ ಪ್ರಮುಖ ಅಗತ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ರಕ್ತ ಕ್ಯಾನ್ಸರ್ ಅಪಾಯ ತಗ್ಗುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ರಕ್ತದಾನ ಮಾಡಿದಾಗ ನಿಮ್ಮ ದೇಹಕ್ಕೆ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ ಮತ್ತು ರಕ್ತದ ಕ್ಯಾನ್ಸರ್ ಅಪಾಯಕಾರಿಗಳಿಂದ ದೂರ ಇರಬಹುದು. ರಕ್ತದಾನದಿಂದ ರಕ್ತದಾನಿಗಳಿಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಆದರೆ, ಇದರಿಂದ ಸಿಗುವ ಆರೋಗ್ಯ ಲಾಭಗಳಿಗೆ ಬೆಲೆ ಕಟ್ಟಲಾಗದು ಎಂದರು.

ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಅದು ಒಬ್ಬರ ಜೀವವನ್ನೂ ಉಳಿಸುತ್ತದೆ. ಜತೆಗೆ ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚುವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಬಣವಾಗುತ್ತದೆ. ರಕ್ತದಾನ ಮಾಡಿದರೆ ಈ ಸಮಸ್ಯೆಗಳು ಇತ್ಯರ್ಥವಾಗುತ್ತದೆ ಎಂದರು.
ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯದ ಜಾಡು ಹಿಡಿಯಬಹುದು ಮತ್ತು ಆಹಾರ, ವ್ಯಾಯಾಮ, ಜೀವನಶೈಲಿ ಮುಂತಾದ ಅಂಶಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ ಎಂದರು.

118 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ರೋಟರಿ ಇಂಟರ್ ನ್ಯಾಷನಲ್ ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ. 200ಕ್ಕೂ ಹೆಚ್ಚು ದೇಶಗಳಲ್ಲಿ 46,000 ಸದಸ್ಯ ಕ್ಲಬ್‌ಗಳಿವೆ. ಸುಮಾರು 1.4ಮಿಲಿಯನ್ ರೋಟರಿ ಸದಸ್ಯರು ಇದ್ದಾರೆ. ಈ ಸಂಸ್ಥೆ ಇತರರಿಗೆ ಸೇವೆಯನ್ನು ಒದಗಿಸುವುದು, ಸಮಗ್ರತೆಯನ್ನು ಉತ್ತೇಜಿಸುವುದು, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಮೂಲಕ ಬಡ ಜನರ ಆರೋಗ್ಯವನ್ನು ಸುಧಾರಿಸುವುದು, ತಾಯಂದಿರು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವುದು, ಶಾಂತಿಯನ್ನು ಉತ್ತೇಜಿಸುವುದು, ಶಿಕ್ಷಣ, ಸಾಕ್ಷರತಾ ಕಾರ್ಯಕ್ರಮ, ನೀರು ಮತ್ತು ನೈರ್ಮಲ್ಯ, ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು, ವ್ಯಾಪಾರ, ವೃತ್ತಿಪರ ಮತ್ತು ಸಾಮುದಾಯಿಕ ನಾಯಕರ ಸಹಭಾಗ್ವಿತದ ಮೂಲಕ ಪ್ರಪಂಚದ ತಿಳಿವಳಿಕೆ, ಸದ್ಭಾವನೆ ಮತ್ತು ಶಾಂತಿಯನ್ನು ಮುನ್ನಡೆಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಮುಕ್ತ ವಿವಿಯ ಡೀನ್‌ಗಳಾದ ಪ್ರೊ.ಎನ್.ಲಕ್ಷ್ಮೀ, ಪ್ರೊ.ರಾಮನಾಥಂ ನಾಯ್ಡು, ಪ್ರಾಧ್ಯಾಪಕರಾದ ಡಾ.ಕೃಷ್ಣಮೂರ್ತಿ, ಡಾ.ಕೆ.ಎನ್. ರವೀಂದ್ರ, ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆಯ ಅಧ್ಯಕ್ಷ ಎಂ.ಮೋಹನ್, ಪದಾಧಿಕಾರಿಗಳಾದ ಡಾ.ಎನ್.ಎಸ್.ದಿವ್ಯಾ, ಡಾ.ಎಚ್.ಆರ್.ವಾಣಿಶ್ರೀ, ಡಾ.ಬಿ.ಎಂ.ಪುನೀತ್ ಕುಮಾರ್, ಡಾ.ರಚನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net