ರಕ್ತದಾನದಿಂದ ಆರೋಗ್ಯ ಸಮತೋಲನ

15 NRD 1
Published on

ನರಗುಂದ: ರಕ್ತದಾನ ಎಲ್ಲ ದಾನಗಳಿಗಿಂತ ಅತೀ ಶ್ರೇಷ್ಠವಾದುದು. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಆಸರೆಯಾಗಬೇಕು. ಮಾರಣಾಂತಿಕ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳನ್ನು ಬದುಕಿಸಲು ರಕ್ತದಾನ ಅಗತ್ಯವಾಗಿದೆ ಎಂದು ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕ ನೀಲಕಂಠ ಮಡಿವಾಳರ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತ ದಾನಿಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರಕ್ತದಾನ ಮಾಡುವುದರಿಂದ ಆರೋಗ್ಯ ಸಮತೋಲನ ಸ್ಥಿತಿಯಲ್ಲಿರುತ್ತದೆ. ಇಂದಿನ ಯುವ ಸಮುದಾಯ ದುಶ್ಚಟಕ್ಕೆ ಬಲಿಯಾಗಿ ರಕ್ತವಿಲ್ಲದೆ ಸಾವಿನ ದವಡೆಯಲ್ಲಿ ಸಿಲುಕುತ್ತಿದ್ದಾರೆ. ರಕ್ತವೆಂದರೆ ಅದು ಜೀವ ದ್ರವ್ಯ. ಹೀಗಾಗಿ ಸತ್ವಯುತ ಆಹಾರ ಸೇವಿಸಿ ಆರೋಗ್ಯವಂತರಾಗಬೇಕು ಎಂದರು.

ಸಾಹಿತಿ ಎ.ಎಸ್. ಮಕಾನದಾರ ಮಾತನಾಡಿ, ಭಾರತೀಯರಾದ ನಾವು ಜಾತೀಯತೆ ಮೀರಿ ಮನಸು ಹಸಿರಾಗಿಸಿಕೊಂಡು ಸಂವಿಧಾನದ ಆಶಯದಂತೆ ಸಹಬಾಳ್ವೆ ನಡೆಸಬೇಕು. ಗತಕಾಲದ ಇತಿಹಾಸದ ಪ್ರಜ್ಞೆ ಸರ್ವರಲ್ಲೂ ಮೂಡಬೇಕು ಎಂದರು.

ಇತ್ತೀಚೆಗೆ ನಿವೃತ್ತರಾದ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿರಸ್ತೇದಾರ ಬಸವರಾಜ ಕುಕನೂರ, ನ್ಯಾಯಾಂಗ ಇಲಾಖೆ ಪ್ರಥಮ ದರ್ಜೆ ನಿವೃತ್ತ ಸಹಾಯಕ ಎ.ಎಸ್. ಮಕಾನದಾರ, ನಿವೃತ್ತ ಶಿಕ್ಷಕರಾದ ಸಂಗಮೇಶ ಕೊಣ್ಣೂರ, ಎಚ್.ಕೆ. ಪಾಟೀಲ ಅವರನ್ನು ಶ್ರೀ ಮಠದಿಂದ ಸತ್ಕರಿಸಲಾಯಿತು.

ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಜನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ, ನಿವೃತ್ತ ಶಿರಸ್ತೇದಾರ ಬಸವರಾಜ ಕುಕನೂರ ಹಾಗೂ ಎಸ್​ವೈಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗುರು ಕಲ್ಲೇದ ಅವರು ಮಾತನಾಡಿದರು.

ಎಸ್.ಎಫ್. ಕೊಣ್ಣೂರ, ಬಿ.ಕೆ. ಹಿರೆಗೌಡ್ರ, ಮುದಬಸಪ್ಪ ನಾಶಿ, ಕರಬಸಪ್ಪ ಐನಾಪೂರ, ಆರ್.ಬಿ. ಚಿನಿವಾಲರ ಇತರರು ಉಪಸ್ಥಿತರಿದ್ದರು. ಆರ್.ಕೆ. ಐನಾಪೂರ ನಿರ್ವಹಿಸಿದರು. ಮಹಾಂತೇಶ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net