

ವಿಜಯವಾಣಿ ಸುದ್ದಿಜಾಲ ಉಡುಪಿ
ವಿವಿಧ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ಜಿಲ್ಲೆಗೆ ಆಗಮಿಸುವ ಹೊರರಾಜ್ಯಗಳ ಕಾರ್ಮಿಕರಿಗೆ ಮಲೇರಿಯಾ, ಫೈಲೇರಿಯಾ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು. ಅವರು ಆಗಮಿಸಿದ 4-5 ದಿನದ ಒಳಗೆ ಸ್ಕ್ರೀನಿಂಗ್ಗೆ ಒಳಪಡಬೇಕು. ಅದರಿಂದ ಸಾಂಕ್ರಮಿಕ ರೋಗ ಹರಡುವುದನ್ನು ತಡೆಯಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್ ಸೂಚನೆ ನೀಡಿದರು.
ನಗರಸಭಾ ಉಪಾಧ್ಯಕ್ಷೆ ರಜನಿ ಹೆಬ್ಬಾರ, ಪೌರಾಯುಕ್ತ ಜೆ.ಮಹೇಶ, ಪರಿಸರ ಅಭಿಯಂತೆ ಸ್ನೇಹಾ ಕೆ.ಎಸ್., ಕಚೇರಿ ವ್ಯವಸ್ಥಾಪಕ ನಾರಾಯಣ ಎಸ್.ಎಸ್., ಆರೋಗ್ಯ ಹಾಗೂ ಕಂದಾಯ ನಿರೀಕ್ಷಕರು, ನಗರಸಭೆಯ ಕಚೇರಿ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿ, ವಿವಿಧ ಬಿಲ್ಡರ್ಸ್ಗಳು ಉಪಸ್ಥಿತರಿದ್ದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಯಾವುದೇ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಅಶುಚಿತ್ವದಿಂದ ಮಲೇರಿಯಾ ಹಾಗೂ ಇನ್ನಿತರ ಸಾಂಕ್ರಮಿಕ ರೋಗಗಳ ಹರಡುವಿಕೆ ಕಂಡು ಬಂದಲ್ಲಿ ಅಂತಹ ಕಟ್ಟಡ ನಿರ್ಮಾಣ ಪ್ರದೇಶಗಳನ್ನು ಪರಿಶೀಲಿಸಿ, ದಂಡ ವಿಧಿಸಲಾಗುವುದು. ಅಲ್ಲದೆ, ಬಿಲ್ಡರ್ಸ್ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಲೇರಿಯಾ ಬಂದಲ್ಲಿ ಗುಣಪಡಿಸಬಹುದು. ಆದರೆ, ಡೆಂಘೆ ಬಂದರೆ ಸರಿಯಾದ ಚಿಕಿತ್ಸೆ ಇಲ್ಲ. ಮುಂಜಾಗೃತೆ ವಹಿಸುವುದೇ ಔಷಧವಾಗಿದೆ. ಡೆಂಘೆ ಕಾಯಿಲೆ ಹರಡುವ ಸೊಳ್ಳೆ ಹಗಲು ಹೊತ್ತಿನಲ್ಲಿಯೇ ಕಚ್ಚುವುದರಿಂದ ಸೂಕ್ತ ರಕ್ಷಣೆ ಅಗತ್ಯ. ಮನೆಗಳ ಸುತ್ತಮುತ್ತ, ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ, ಮನೆಗಳ ಓವರ್ ಹೆಡ್ ಟ್ಯಾಂಕ್ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. | ಡಾ. ಪ್ರಶಾಂತ ಭಟ್. ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ