

ಅರಸೀಕೆರೆ ಗ್ರಾಮಾಂತರ: ಆರೋಗ್ಯ ತಪಾಸಣೆಯಿಂದ ಆರೋಗ್ಯದ ಸ್ಥಿತಿಗತಿ ತಿಳಿದು ಚಿಕಿತ್ಸೆ ಪಡೆಯಬಹುದು ಎಂದು ಡಾ. ಇಂಪನಾ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿಯಲ್ಲಿ ಇಂಡಿಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಹಾಸನ ಹಾಗೂ ಒಕ್ಕಲಿಗ ಸಂಘ ಹಾರನಹಳ್ಳಿ ಅವರ ಸಹಯೋಗದೊಂದಿಗೆ ಹಾರನಹಳ್ಳಿ ರಾಮಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ತಪಾಸಣೆ ಬಗ್ಗೆ ಜಾಗೃತಿ ಮೂಡಿಸುವುದು ಮಹತ್ವದ ಕೆಲಸ. ಜನರ ಆರೋಗ್ಯ ತಪಾಸಣೆಗೆ ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗುತ್ತದೆ. ಗ್ರಾಮದ ರೈತರು, ಮಹಿಳೆಯರು ಆರೋಗ್ಯದ ಬಗ್ಗೆ ನಿರ್ಲಕ್ಷೃ ತೋರದೆ ತಜ್ಞ ವೈದ್ಯರ ಬಳಿ ತಪಾಸಣೆಗೊಳಪಡಿಸಿ ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾಸನ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಪರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನ ನಡೆಸುವುದರಿಂದ ಪ್ರಾಥಮಿಕ ಹಂತದಲ್ಲೇ ಕಾಯಿಲೆ ಗುರುತಿಸಿ ಚಿಕಿತ್ಸೆ ನೀಡಬಹುದು ಎಂದರು.
ಒಕ್ಕಲಿಗ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಇಂಡಿಯಾನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಗ್ರಾಮೀಣ ಭಾಗಕ್ಕೆ ಬಂದು ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಸನ ಕೇಶವ ನೇತ್ರಾಲಯದ ವತಿಯಿಂದ ಕಣ್ಣಿನ ಪರೀಕ್ಷೆ ಮಾಡಿದರು. ಹಾರನಹಳ್ಳಿ ಗ್ರಾಮದ ಸುತ್ತಮುತ್ತಲ ಗ್ರಾಮಸ್ಥರು ಶಿಬಿರಕ್ಕೆ ಬಂದು ರಕ್ತ ಪರೀಕ್ಷೆ, ಇಸಿಜಿ ವಿವಿಧ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ದೇವರಾಜು, ಮನುಕುಮಾರ್, ಕಾರ್ಯದರ್ಶಿ ಸುರೇಶ್, ಲೋಕೇಶ್, ರಜನಿ ಇತರರು ಉಪಸ್ಥಿತರಿದ್ದರು.