ಆರೋಗ್ಯದ ಅರಿವು ಅಗತ್ಯ

24 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ದಿನಮಾನಗಳಲ್ಲಿ ಆಹಾರದಲ್ಲಿ ಆರೋಗ್ಯದ ಅರಿವು ಬೇಕಿದೆ ಎಂದು ನ್ಯಾಯವಾದಿ ಮೃತ್ಯುಂಜಯ ವಸ್ತ್ರದ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಶುಕ್ರವಾರ ಆಯೋಜಿಸಿದ್ದ ಆಹಾರದಲ್ಲಿ ಆರೋಗ್ಯ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಹಿಂದೆ ರೈತರು 9 ತಿಂಗಳವರೆಗೆ ಬರುವ ಬೆಳೆ ರೈತರು ಬೆಳೆಯುತ್ತಿದ್ದರು. ಹಾಗಾಗಿ ಮನುಷ್ಯ ಶತಾಯುಷಿಯಾಗಿ ಬದುಕುತ್ತಿದ್ದ. ಇಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಬಳಸಿ, 3 ತಿಂಗಳಿಗೊಮ್ಮೆ ಫಸಲು ತೆಗೆಯುತ್ತಿದ್ದಾರೆ. ಅಂತಹ ಆಹಾರ ಸೇವನೆಯಿಂದ ಆಯುಷ್ಯ 30 ವರ್ಷಕ್ಕೆ ಕ್ಷೀಣಿಸಿದೆ. ಅನೇಕ ಕಾಯಿಲೆ ನಿರ್ಮೂಲನೆ ಮಾಡುವ ಸಾಮರ್ಥ್ಯ ಗೋಮೂತ್ರದಲ್ಲಿದೆ. ಅದನ್ನು ಬಳಸಲು ಜನ ಹಿಂದೇಟು ಹಾಕುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕುಂದಗೋಳ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆ ಅನಿವಾರ್ಯ. ಆಧುನಿಕ ಕೃಷಿ ಪದ್ಧತಿಗೆ ರೈತ ಹೊಂದಿಕೊಳ್ಳಲೇ ಬೇಕು. ಬೆಳೆಗಳ ಇಳುವರಿ ಕಡಿಮೆಯಾಗಿ ರೈತನ ಆದಾಯ ಕನಿಷ್ಠ ಮಟ್ಟಕ್ಕೆ ಇಳಿದಿದೆ. ವಾಸ್ತವವೇ ಬೇರೆ, ವೇದಿಕೆ ಮೇಲೆ ನಿಂತು ಮಾತನಾಡುವುದೇ ಬೇರೆ. ಸರ್ಕಾರ ಸಹ ರೈತರಿಗೆ ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಡಾ. ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಮಹಾಂತೇಶ ನರೇಗಲ್ಲ, ಕೆ.ಜಿ. ದೇವರಮನಿ, ಸುಜಾತಾ ಹಡಗಲಿ, ಬಸವರಾಜ ಅರವಳದ, ಯು.ಎಸ್.ಕುನ್ನಿಭಾವಿ, ಚನ್ನು ನೂಲ್ವಿ, ಕೆ.ಎಂ. ಅಂಗಡಿ, ಶಂಭಯ್ಯ ಹಿರೇಮಠ, ವಿರುಪಾಕ್ಷಿ ಬೆಟಸೂರ, ಎಸ್.ಕೆ. ಕುಂದರಗಿ, ಇತರರು ಇದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ನಿರೂಪಿಸಿದರು. ಬಿ.ಜಿ. ಬಾರ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net