

ಹೊಳೆನರಸೀಪುರ : ಹದಿ ಹರೆಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಶುದ್ಧವಾಗಿ ಇಟ್ಟುಕೊಂಡರೆ ಜೀವನಪೂರ್ಣ ಸುಖವಾಗಿ ಇರಬಹುದು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಕರ್ನಾಟಕ ಏಡ್ಸ್ ಪ್ರಿವೆಂನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಸಂಯುಕ್ತವಾಗಿ
ಆಯೋಜನೆ ಮಾಡಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಅರಿವಿನ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಸ್ಪತ್ರೆ ಮತ್ತು ಲ್ಯಾಬ್ ಹಂತದಲ್ಲಿ ಸುರಕ್ಷಾ ಕ್ರಮ ವಹಿಸುವ ಮೂಲಕ ಏಡ್ಸ್ ನಿಯಂತ್ರಣಕ್ಕೆ ಗಮನ ಹರಿಸಲಾಗಿದೆ. ಲೈಂಗಿಕ ಸಂಪರ್ಕದಿಂದ ರೋಗ ಹರಡುವುದನ್ನು ತಡೆಯುವಲ್ಲಿ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಪ್ರತಿ ಮನೆಯಲ್ಲೂ ಈ ಬಗ್ಗೆ ಅರಿವಿನ ಚರ್ಚೆ ಆಗಬೇಕು ಎಂದವರು ಸಲಹೆ ನೀಡಿದರು.
ಸಹಕಾರ ಮುಖ್ಯ: ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಅಧಿಕಾರಿ ರವಿಕುಮಾರ್ ಮಾತನಾಡಿ, ಯುವಜನರಲ್ಲಿ ಆರೋಗ್ಯದ ಅರಿವು ಮೂಡಿಸಲು ಪಾಲಕರು, ಶಿಕ್ಷಕರು ಸಹಕರಿಸಬೇಕು ಎಂದರು. ಸಲಿಂಗಕಾಮದಿಂದ ಏಡ್ಸ್ ಹೆಚ್ಚಾಗಿ ಹರಡುತ್ತಿದೆ. ಇದಕ್ಕೆ ಮೊಬೈಲ್ ಫೋನಿನಲ್ಲಿ ಲಭ್ಯವಿರುವ ಜಾಲತಾಣಗಳು ಪ್ರಚೋದನೆ ನೀಡುತ್ತಿವೆ. ಈ ಬಗ್ಗೆ ಯುವಜನರು ಜಾಗೃತವಾಗಿದ್ದರೆ ಮಾತ್ರ ಬದುಕು ಹಸನಾಗಿರುತ್ತದೆ ಎಂದರು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಸಮುದಾಯಗಳ ನಡುವೆ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದವರು ಸಲಹೆ ನೀಡಿದರು. ತಾಲೂಕು ಆರೋಗ್ಯಧಿಕಾರಿ ಡಾ. ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಐಸಿಟಿಸಿ ವಿಭಾಗದ ವೈದ್ಯಾಧಿಕಾರಿ ಡಾ. ರೇಖಾ, ಡಾ. ಲೋಕೇಶ್, ಡಾ. ನಾಗೇಂದ್ರ, ಡಾ. ಅನಿತಾ, ಡಾ. ಅಶ್ವತ್ಥಿ ಇತರರು ಉಪಸ್ಥಿತರಿದ್ದರು.