ಆರು ಕೇಂದ್ರಗಳಲ್ಲಿ ಆರೋಗ್ಯ, ಕ್ಷೇಮ ಕೇಂದ್ರ

ಆರು ಕೇಂದ್ರಗಳಲ್ಲಿ ಆರೋಗ್ಯ, ಕ್ಷೇಮ ಕೇಂದ್ರ
Published on

ಆಲೂರು: ಸಮಾಜದ ಕಟ್ಟಕಡೆ ವ್ಯಕ್ತಿಗೂ ಆರೋಗ್ಯ ಸೇವೆ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿವೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಲೂರು ತಾಲೂಕಿನ ಮಡಬಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಜನ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಮೃತ ಪಡುವುದನ್ನ ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈಗಾಗಲೇ ತಾಲೂಕಿನ ಆರು ಕೇಂದ್ರಗಳಲ್ಲಿ ಅರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾನು ಶಾಸಕನಾದ ನಂತರ ರಸ್ತೆ, ಚರಂಡಿ, ಅಂಗನವಾಡಿ, ಶಾಲಾ ಕಟ್ಟಡ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಇದೇ ಗ್ರಾಮದವರಾದ ಕಾಂತರಾಜು ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದರು.

ಗ್ರಾಮೀಣ ಜನತೆ ಕೃಷಿ, ಹೈನುಗಾರಿಕೆ ಚಟುವಟಿಕೆ ಒತ್ತಡದ ನಡುವೆ ಆರೋಗ್ಯ ನಿರ್ಲಕ್ಷಿಸದೆ ಆರೋಗ್ಯ ಕೇಂದ್ರದಲ್ಲಿ ಸಿಗುವ ಎಲ್ಲ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂನ ನಿವೃತ್ತ ಸಿಇಒ ಎಂ.ಡಿ.ಕಾಂತರಾಜು ಮಾತನಾಡಿ, ನಾನು ಜಿಪಂ ಸಿಇಒ ಆಗಿದ್ದ ಸಂದರ್ಭದಲ್ಲಿ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಚರಂಡಿ ಹೀಗೆ ಹತ್ತು ಹಲವು ಕೆಲಸ ಮಾಡಿದ್ದೇನೆ. ಜತೆಗೆ ಶಾಸಕ ಸಿಮೆಂಟ್ ಮಂಜು ಅವರು ಯುವಕರಿದ್ದು, ಅಭಿವೃದ್ಧಿ ವಿಷಯದಲ್ಲಿ ಉತ್ಸುಕರಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೆ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕಿದೆ ಎಂದರು.

ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಮಡಬಲು ಗ್ರಾಪಂ ವ್ಯಾಪ್ತಿಯಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆ ಹಾಗೂ ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಜನಸಾಮಾನ್ಯರಿಗೆ ಸ್ಪಂದಿಸಿದ್ದೇವೆ. ಶಾಸಕ ಸಿಮೆಂಟ್ ಮಂಜು ಅವರು ಕೂಡ ಯುವಕರಿದ್ದು, ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ನಿಸಾರ್ ಫಾತಿಮಾ, ಜೆಡಿಎಸ್ ಅಧ್ಯಕ್ಷ ಮಂಜೇಗೌಡ, ಗ್ರಾಪಂ ಅಧ್ಯಕ್ಷೆ ವನಿತಾ ಮಂಜುನಾಥ್, ಉಪಾಧ್ಯಕ್ಷೆ ಶ್ರುತಿ, ಡಾ.ಪ್ರಿಯಾಂಕಾ, ಡಾ.ಸತೀಶ್, ಅರೋಗ್ಯ ಶಿಕ್ಷಣಾಧಿಕಾರಿ ಸತೀಶ್, ಬಿಜೆಪಿ ಮುಖಂಡ ಸಂದೇಶ್,ನಿಂಗರಾಜ್, ಗಂಗಾಧರ್, ಚಿದಾನಂದ್, ನಿಜಲಿಂಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net