ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಲಿ: ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸಲಹೆ

Health and Eye Checkup Camp Mandya
Published on

ಮಂಡ್ಯ: ವಿದ್ಯಾರ್ಥಿಗಳು ಶಾಲಾಹಂತದಲ್ಲೇ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಂಡ್ಯದ ರಕ್ತ ನಿಧಿ ಕೇಂದ್ರದ(ಮಿಮ್ಸ್) ಸಹಯೋಗದಲ್ಲಿ ತಾಲೂಕಿನ ಹಳೇಬೂದನೂರು ಗ್ರಾಮದ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಜೂನಿಯರ್ ರೆಡ್ ಕ್ರಾಸ್‌ಗೆ ಸೇರುವ ಮೂಲಕ ಶಾಲಾಹಂತದಲ್ಲೇ ರಕ್ತದಾನದ ಮಹತ್ವವನ್ನು ಅರಿತು, ಸೇವಾ ಮನೋಭಾವವನ್ನು ಬೆಳೆಸಿಕೊಂಡು ಇತರರಿಗೂ ಸ್ಪೂರ್ತಿಯಾಗಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯತೆ, ಸಹಾಯ, ಸ್ನೇಹ ಮೊದಲಾದ ಗುಣಗಳನ್ನು ಬೆಳೆಸಿಕೊಂಡು ಜತೆಗೆ ಓದಿನಲ್ಲಿ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಬೇಕು. ರಕ್ತದಾನ ಅನೇಕ ಜನರ ಪ್ರಾಣವನ್ನು ಉಳಿಸುತ್ತದೆ. ಇಂತಹ ಪುಣ್ಯ ಕಾರ್ಯವನ್ನು ಮಾಡುವ ಮನಸ್ಸು ಬೆಳೆಸಿಕೊಂಡು ದೊಡ್ಡವರಾಗಿ ಮುಂದುವರೆಯಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಮುರಳೀಧರ್ ಭಟ್, ಸಚ್ಚಿದಾನಂದ ಟ್ರಸ್ಟಿನ ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯ ಕೆಂಪೇಗೌಡ, ವಕೀಲ ನಾಗೇಶ್, ಮುಖ್ಯಶಿಕ್ಷಕ ಗೌತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net