

ಹುಬ್ಬಳ್ಳಿ: ಆಹಾರ ಧಾನ್ಯ ವರ್ತಕರ ಸಂಘ, ಕೆಎಲ್ಇ ಆಸ್ಪತ್ರೆ ಮತ್ತು ರಾಷ್ಟ್ರೊತ್ಥಾನ ರಕ್ತನಿಧಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಮೇ 16ರಂದು ಬೆಳಗ್ಗೆ 9ಕ್ಕೆ ಎಪಿಎಂಸಿ ಆವರಣದ ತರಕಾರಿ ಮಾರುಕಟ್ಟೆ ಹಿಂಬದಿಯ ಎಲ್1, ಎಲ್2 ಮುಖ್ಯರಸ್ತೆಯಲ್ಲಿ ಏರ್ಪಡಿಸಲಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಚನ್ನು ಹೊಸಮನಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಸಮರ ಸಾರಿರುವ ಭಾರತದ ವೀರಯೋಧರು ಹಾಗೂ ಸಂಭಾವ್ಯ ಅವಘಡಗಳಲ್ಲಿ ಗಾಯಗೊಂಡವರಿಗೆ ಅಗತ್ಯ ರಕ್ತವನ್ನು ದಾಸ್ತಾನು ಮಾಡುವುದು ಹಾಗೂ ಮುಂಜಾಗ್ರತೆ ಕ್ರಮವಾಗಿ ಸಂಘವು ಎಪಿಎಂಸಿ ಆವರಣದ ಎಲ್ಲ ವರ್ತಕರ ಸಹಕಾರದೊಂದಿಗೆ ಈ ಶಿಬಿರ ಆಯೋಜಿಸಿದೆ ಎಂದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯದೊಂದಿಗೆ ನೇತ್ರ, ಹೃದಯ ಮುಂತಾದ ವಿಶೇಷ ತಪಾಸಣೆಗಳು ನಡೆಯಲಿವೆ. ಕಾರ್ಮಿಕರು, ಸಾರ್ವಜನಿಕರು ಎಲ್ಲರೂ ಪಾಲ್ಗೊಳ್ಳಬಹುದು. ಎಪಿಎಂಸಿ ಆವರಣದ ಒಂದು ಸಾವಿರ ಕಾರ್ಮಿಕರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕನಿಷ್ಠ 800 ಯೂನಿಟ್ ರಕ್ತ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಇದರ ಜತೆಗೆ ಅಂಗಾಂಗ ದಾನ, ನೇತ್ರ ದಾನದ ಬಗ್ಗೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಕಾರ್ಮಿಕರಿಗೆ ಕೆಎಲ್ಇ ಆಸ್ಪತ್ರೆಯವರು ಆರೋಗ್ಯ ಕಾರ್ಡ್ ವಿತರಿಸಲಿದ್ದು, ಆಸ್ಪತ್ರೆಯಲ್ಲಿ ನಿಗದಿತ ಅವಧಿಯವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಇಂತಹ ಹಲವು ವಿಧಾಯಕ ಕಾರ್ಯಕ್ರಮಗಳನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಗಣೇಶ ಕಠಾರೆ, ಕಾರ್ಯದರ್ಶಿ ಅರ್ಜುನ ಅಗರವಾಲ್, ಶಿವಾನಂದ ಸಣ್ಣಕ್ಕಿ, ಸೋಮಶೇಖರ ಹದ್ಲಿ ಗೋಷ್ಠಿಯಲ್ಲಿದ್ದರು.