ಮಾದಾಪುರದಲ್ಲಿ ಅರೋಗ್ಯ ತಪಾಸಣಾ ಶಿಬಿರ

17ark1
Published on

ಅರಕಲಗೂಡು: ಅರೋಗ್ಯ ಸೇವೆಯನ್ನೂ ಜನರ ಮನೆಯ ಬಾಗಿಲಿಗೆ ತಲುಪಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಪರಶುರಾಮ ಶಿರೂರ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ಮಾದಾಪುರದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮಕ್ಕೆ ಆರೋಗ್ಯ ಸೇವೆಯನ್ನು ತಲುಪಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಾ ಬಂದಿದೆ. ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಉತ್ತಮ ಆರೋಗ್ಯವಂತ ವ್ಯಕ್ತಿ ಆಗಿರಬೇಕೆಂಬ ಉದ್ದೇಶದಿಂದ ಸರ್ಕಾರವು ಅರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲು ಉತ್ತೇಜನ ನೀಡಿದೆ ಎಂದರು.
ಸರ್ಕಾರದಿಂದ ಸಿಗುವ ಹಲವಾರು ಸವಲತ್ತುಗಳು ಲಭ್ಯವಿದ್ದು, ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳುವುದರ ಮೂಲಕ ಆರೋಗ್ಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸುವುದರ ಮೂಲಕ ಸ್ವಾಸ್ಥೃ ಸಂರಕ್ಷಣೆ ಮಾಡಿಕೊಳ್ಳಬಹುದು ಎಂದರು.
ಶಿಬಿರದಲ್ಲಿ ಭಾಗವಹಿಸಿದ್ದ 80 ಕ್ಕೂ ಹೆಚ್ಚು ಜನರು ಮಧುಮೇಹ ಹಾಗೂ ಅಧಿಕ ರಕ್ತದ ಒತ್ತಡ, ಎಚ್‌ಐವಿ ಹಾಗೂ ಕ್ಷಯ ರೋಗ ಪರೀಕ್ಷೆ ಮಾಡಿಸಿಕೊಂಡರು. ತಾಲೂಕು ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞರಾದ ಗೌರಮ್ಮ, ಸಹಾಭಾಗಿಣಿ ಸಂಘದ ಕಾರ್ಯಕರ್ತ ಪ್ರಕಾಶ ಹುಲಿಕಲ್, ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಸುರಕ್ಷಣಾಧಿಕಾರಿ ಚಿತ್ರಾ , ಆಶಾ ಕಾರ್ಯಕರ್ತೆ ವಾಣಿ, ತಾಲೂಕು ಪಂಚಾಯಿತಿ ಅಮೃತ ಆರೋಗ್ಯ ಅಭಿಯಾನದ ಸಂಯೋಜಕ ಚಂದ್ರು, ಗ್ರಾಪಂ ಪಿಡಿಒ ಗೋವಿಂದಸ್ವಾಮಿ, ಕಾರ್ಯದರ್ಶಿ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net