ಮೂರ್ನಾಡುವಿನಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ

health
Published on

ಮಡಿಕೇರಿ

ದೇವರು ಕೊಟ್ಟಿರುವ ಮಹತ್ವದ ವರವಾಗಿರುವ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಉತ್ತಮ ಆರೋಗ್ಯ ಕಾಳಜಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಹೇಳಿದರು. ಮೂರ್ನಾಡು ಗ್ರಾಮಪಂಚಾಯತ್ ಸಭಾಭವನದಲ್ಲಿ ಮಡಿಕೇರಿಯ ರೋಟರಿ ವುಡ್ಸ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಮೂರ್ನಾಡು ಗ್ರಾಮಪಂಚಾಯತ್ ಮತ್ತು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಹವನ್ನೇ ದೇಗುಲ ಎಂದು ಭಾವಿಸುತ್ತೇವೆ. ಹೀಗಿರುವಾಗ ದೇವಾಲಯದಂತೆಯೇ ನಮ್ಮ ದೇಹದ ಆರಾಧನೆಯೂ ಮುಖ್ಯ ಪಾತ್ರ ವಹಿಸುತ್ತದೆ. ನಿಯಮಿತವಾದ ಆಹಾರ ಸೇವನೆ, ವ್ಯಾಯಾಮ, ಸೂಕ್ತ ಆರೋಗ್ಯ ತಪಾಸಣೆ ಮೂಲಕ ನಮ್ಮ ದೇಹವನ್ನು ಆರಾಧನೆ ಮಾಡಬೇಕಾಗಿದೆ.ರೋಗ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗುವ ಮನೋಭಾವ ಬದಲಾಗಿ, ಆಗಿಂದಾಗ್ಗೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ವ್ಯಕ್ತಿಯ ಆರೋಗ್ಯ ಉತ್ತಮವಾಗಿದ್ದಾಗ ಆತನಿಂದ ಆರೋಗ್ಯವಂತ ಸಮಾಜಕ್ಕೆ ಬಹುಮುಖ್ಯ ಕೊಡುಗೆ ಲಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಊಹೆಗೂ ಮೀರಿ ಹೆಚ್ಚಾಗಿ ವ್ಯಾಪಿಸುತ್ತಿದೆ. ಈ ನಿಟ್ಟಿನಲ್ಲಿ ಇಂಥ ತಪಾಸಣಾ ಶಿಬಿರಗಳು ಕ್ಯಾನ್ಸರ್ ಪತ್ತೆಹಚ್ಚಲು ಮುಖ್ಯವಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಹಬ್ಬಗಳು, ಶುಭ ಸಮಾರಂಭಗಳು ನಮ್ಮ ಜೀವನಕ್ಕೆ ನೆಮ್ಮದಿ, ಸಂತೋಷ ನೀಡಿದರೆ, ಇಂಥ ಆರೋಗ್ಯ ಶಿಬಿರಗಳು ಸಮಾಜದ ಪಾಲಿಗೆ ನಿಜವಾದ ಉತ್ಸವಗಳಾಗಿ ಕಾಣುತ್ತವೆ. ಇಂಥ ಶಿಬಿರಗಳ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ತೋರವುದೇ ಮತ್ತೊಂದು ಸಂಭ್ರಮವಾಗಬೇಕಾಗಿದೆ. ಕ್ಯಾನ್ಸರ್ ಬಂದರೂ ಜೀವನ ಸೋಲುವುದಿಲ್ಲ ಎಂಬ ಸಂದೇಶವನ್ನು ಎಲ್ಲೆಡೆ ವ್ಯಾಪಿಸಲು ಪ್ರತೀಯೋರ್ವರೂ ಮುಂದಾದಲ್ಲಿ ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೆರ್ಯ ತುಂಬಲು ಸಾಧ್ಯವಾಗುತ್ತದೆ. ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮೂಲಕ ವ್ಯಕ್ತಿಯೊಂದಿಗೆ ಆತನ ಕುಟುಂಬ ವರ್ಗವೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

ರೋಟರಿ ಜಿಲ್ಲೆ 3181 ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಆರೋಗ್ಯ ಮತ್ತು ಶಿಕ್ಷಣದ ಕಾಯಧಯೋಜನೆಗಳಿಗೆ ಆದ್ಯತೆ ನೀಡುತ್ತಾ ಬಂದಿವೆ. 225 ದೇಶಗಳಲ್ಲಿನ 45 ಸಾವಿರ ರೋಟರಿ ಸಂಸ್ಥೆಗಳು ಕ್ಯಾನ್ಸರ್‌ನಂಥ ಮಾರಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಸಮಾರೋಪಾದಿಯಲ್ಲಿ ಹಮ್ಮಿಕೊಂಡಿದೆ. ರೋಟರಿ ವುಡ್ಸ್ ಈ ನಿಟ್ಟಿನಲ್ಲಿ ಮೂರ್ನಾಡು ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಗೆ ಮಾಹಿತಿ ನೀಡಲು ಇಂಥ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ರೋಟರಿ ವಲಯ 6 ರ ಸಹಾಯಕ ಪ್ರಾಂತಪಾಲ ದಿಲನ್ ಚಂಗಪ್ಪ ಮಾತನಾಡಿ, ಸಮುದಾಯ ಸೇವಾ ಚಟುವಟಿಕೆಗಳಿಗೆ ಪ್ರಸಿದ್ಧಿಯಾಗಿರುವ ರೋಟರಿ ಸಂಸ್ಥೆಗಳು ಪೊಲೀಯೋ ನಿರ್ಮೂಲನೆಯಲ್ಲಿಯೂ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಿವೆ. ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಹೊರತು ಪಡಿಸಿದಂತೆ ಜಾಗತಿಕವಾಗಿ ಬೇರೆಲ್ಲಾ ದೇಶಗಳಲ್ಲಿ ಪೊಲೀಯೋ ನಿರ್ಮೂಲನೆಯಾಗುವಲ್ಲಿ ರೋಟರಿಯ ಪಾತ್ರ ಮಹತ್ವದ್ದು ಎಂದರು.

ಕಾಂತೂರು ಮೂರ್ನಾಡು ಗ್ರಾಮಪಂಚಾಯತ್ ಅಧ್ಯಕ್ಷ ಕುಶನ್ ರೈ ಮಾತನಾಡಿ, ಮೂರ್ನಾಡು ಪಟ್ಟಣದಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ರೋಟರಿ ವುಡ್ಸ್ ಬಗ್ಗೆ ಶ್ಲಾಘಿಸಿದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮೂರ್ನಾಡು ಪಂಚಾಯತ್ ಸದಾ ಜತೆಗೂಡಲಿದೆ ಎಂದೂ ಭರವಸೆ ನೀಡಿದರು.

ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಸ್ವಾರ್ಥ ರಹಿತ ಸೇವೆಗೆ ರೋಟರಿ ಮಾದರಿಯಾಗಿದೆ. ಹೀಗಾಗಿಯೇ 120 ವರ್ಷಗಳಿಂದ ಜಾಗತಿಕವಾಗಿ ರೋಟರಿ ಅತ್ಯಂತ ಜನಮನ್ನಣೆ ಗಳಿಸಿ ಪ್ರಬಲ ಸಂಸ್ಥೆಯಾಗಿ ಮುಂದುವರೆದಿದೆ. ಮತ್ತಷ್ಟು ಗ್ರಾಮೀಣ ಭಾಗಗಳಲ್ಲಿ ರೋಟರಿ ವುಡ್ಸ್ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಿದೆ ಎಂದರು.

ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಿರ್ದೇಶಕ ವಸಂತ್ ಕುಮಾರ್, ಶಿಬಿರ ಸಂಚಾಲಕ ಚಂದ್ರಶೇಖರ್, ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ರೆಜಿಲ್ ರಜನ್, ರೋಟರಿ ವುಡ್ಸ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ನಿರ್ದೇಶಕರು, ಗ್ರಾಮಪಂಚಾಯತ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net