

ಹನೂರು : ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಸಂದರ್ಭ ಎದುರಾಗುತ್ತಿದ್ದು, ಪ್ರತಿಯೊಬ್ಬರೂ ಸ್ವಾಸ್ಥೃ ಪಾಲನೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ನಿವಾಸದಲ್ಲಿ ವೈದ್ಯರಿಂದ ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಗೃಹ ಆರೋಗ್ಯ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲಸದ ಒತ್ತಡ, ಸಮತೋಲನ ಆಹಾರ ಸೇವೆನೆ ಮಾಡದಿರುವುದು, ಅಶುಚಿತ್ವ ಹಾಗೂ ಇನ್ನಿತರೆ ಕಾರಣಗಳಿಂದ ಹಲವರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಮಾಜದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಕೆಲಸದ ವೇಳೆ ಸ್ಥಿತಿ ಸ್ಥಾಪಕತ್ವ ಕಾಯ್ದುಕೊಳ್ಳಬೇಕು. ರೋಗ ರುಜಿನಗಳು ಅಂಟದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ಹೆಚ್ಚು ತರಕಾರಿ, ಸೊಪ್ಪು, ಹಣ್ಣು ಹಾಗೂ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಈ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಸರ್ಕಾರ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಸಲುವಾಗಿ ‘ಗೃಹ ಆರೋಗ್ಯ ಸೇವೆ’ ಜಾರಿಗೊಳಿಸಿದೆ. ವೈದ್ಯರು, ನರ್ಸ್ ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಆದ್ದರಿಂದ ಕ್ಷೇತ್ರದ ಜನ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
14 ಸಮಸ್ಯೆಗಳಿಗೆ ಚಿಕಿತ್ಸೆ:
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಮಾತನಾಡಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಡಯಾಬಿಟಿಕ್, ಸ್ತನ, ಗರ್ಭಕೋಶದ ಕ್ಯಾನ್ಸರ್, ಕಿಡ್ನಿ, ರಕ್ತಹೀನತೆ, ಶ್ವಾಸಕೋಶ ಸೇರಿದಂತೆ 14 ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ವೈದ್ಯ ಡಾ. ಉಲ್ಲಾಸ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಂಜುನಾಥ್, ಸಂತೋಷ್, ನಿಂಬೇಶ್ ಹಾಗೂ ಇನ್ನಿತರರು ಇದ್ದರು.