

ಹುಣಸೂರು: ಶೈಕ್ಷಣಿಕ ವ್ಯವಸ್ಥೆ ಕುರಿತಾಗಿನ 50 ಅಂಶಗಳ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಲು ಮುಂದಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜವರೇಗೌಡ ತಿಳಿಸಿದರು.
ನಗರದ ಆದರ್ಶ ವಿದ್ಯಾಲಯದಲ್ಲಿ ಬುಧವಾರ ಪ್ರೌಢಶಾಲಾ ಮುಖ್ಯಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘಟಿತ ಪ್ರಯತ್ನದಿಂದ ಮಾತ್ರ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ. ವಿದ್ಯಾರ್ಥಿವಾರು ಕ್ರಿಯಾ ಯೋಜನೆಯನ್ನು ರಚಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ಜೂನ್ ಮಾಹೆಯಿಂದಲೇ ನಿರ್ವಹಿಸಿರಿ. ವಿದ್ಯಾರ್ಥಿಗಳ ಕೃತಿ ಸಂಪುಟ ನಿರ್ವಹಣೆಯ ಮೂಲಕ ಎಲ್ಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತಹ ಹಂತಕ್ಕೆ ತರಬೇಕೆಂದು ಸೂಚಿಸಿದರು.
ಘಟಕ ಪರೀಕ್ಷೆ, ಕಿರುಪರೀಕ್ಷೆ, ವಾರದ ಪರೀಕ್ಷೆ, ಮಾಸಿಕ ಪರೀಕ್ಷೆಯಂತಹ ಸರಣಿ ಪರೀಕ್ಷೆಗಳ ಮೂಲಕ ಮಕ್ಕಳನ್ನು ಸಿದ್ಧಗೊಳಿಸಿ ಪರೀಕ್ಷೆಯ ಭಯವನ್ನು ಹೋಗಲಾಡಿಸಬೇಕು. ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ವಿಷಯ ಶಿಕ್ಷಕರ ಪಾಠ ವೀಕ್ಷಣೆ ಮಾಡಿ ಅಗತ್ಯ ಮಾರ್ಗದರ್ಶನ ನೀಡಬೇಕು. ಕ್ವಿಜ್, ರಸಪ್ರಶ್ನೆ ಕಾರ್ಯಕ್ರಮ, ಪಾಲಕರ ಸಭೆ, ಮನೆ ಭೇಟಿ, ತಾಯಂದಿರ ಸಭೆಗಳನ್ನು ಪ್ರತಿ ತಿಂಗಳು ಆಯೋಜಿಸಿ ವಿದ್ಯಾರ್ಥಿಯ ಕಲಿಕೆಯ ಸಾಮರ್ಥ್ಯ ತಿಳಿಸಬೇಕು. ಪ್ರತಿ ತಾಲೂಕು ಹಂತದಲ್ಲಿ ಕಡಿಮೆ ಫಲಿತಾಂಶ ಪಡೆದ ಪ್ರೌಢಶಾಲೆಗಳನ್ನು ದತ್ತು ಪಡೆಯಲಾಗಿದ್ದು, ಸಮಗ್ರ ಯೋಜನೆ ರಚಿಸಿ ಅದನ್ನು ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಕಳೆದ ಸಾಲಿನ ಫಲಿತಾಂಶದ ಕುರಿತು ಮುಖ್ಯಶಿಕ್ಷಕರಿಂದ ಮಾಹಿತಿಯನ್ನು ಕಲೆಹಾಕಿದರು. ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ನಿರೂಪ ವೆಸ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ, ವಿಷಯವಾರು ಪರೀಕ್ಷಕ ರಾಜಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ, ಇಸಿಒ ಹೇಮಂತ್‌ಕುಮಾರ್, ತಾಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಜರಿದ್ದರು.