

ನರೇಗಲ್ಲ: ಕಳೆದ 30 ದಿನಗಳಿಂದ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಹಲವು ಕೆಲಸಗಳಿಗಾಗಿ ಪಟ್ಟಣ ಪಂಚಾಯಿತಿಗೆ ಸಾರ್ವಜನಿಕರು ಅಲೆದಾಡಿ ಸುಸ್ತಾಗಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿ, ಕೆಲ ಸಮಯ ಪ.ಪಂ ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿದರು.
ಮೈಲಾರಪ್ಪ ಗೋಡಿ ಮಾತನಾಡಿ, ಒಂದು ತಿಂಗಳಿಂದ ಮುಖ್ಯಾಧಿಕಾರಿ ಕಚೇರಿಗೆ ಬರುತ್ತಿಲ್ಲ. ಇ-ಸ್ವತ್ತು, ಖಾತೆ ಬದಲಾವಣೆ, ವಿದ್ಯುತ್ ದೀಪ, ಸ್ವಚ್ಛತೆ, ನೈರ್ಮಲ್ಯ, ಕುಡಿಯುವ ನೀರು ಪೂರೈಕೆ, ಸರ್ಕಾರಿ ಕಾರ್ಯಕ್ರಮ ಆಯೋಜನೆ, ಶೌಚಗೃಹಗಳ ಅನುದಾನ ಬಿಡುಗಡೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿವೆ. ವಾರದಲ್ಲಿ ಪಟ್ಟಣ ಪಂಚಾಯಿತಿಗೆ ಕಾಯಂ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ನೇಮಕ ಮಾಡದಿದ್ದರೆ ಪಪಂ ಕಚೇರಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ರಮೇಶ ಮಣ್ಣವಡ್ಡರ, ಖಾಸೀಂಸಾಬ್ ಗಡಾದ, ಅಯ್ಯಪ್ಪ ಕಾತರಕಿ, ಬಸವರಾಜ ಹುಯಿಲಗೋಳ, ಸುರೇಶ ಹುನಗುಂದ, ರಂಗಪ್ಪ ಒಳಕೋಟಿ, ಯಲ್ಲಪ್ಪ ದೊಡ್ಡಮನಿ, ಮಲ್ಲಯ್ಯ ಗಚ್ಚಿನಮಠ, ರಾಮಣ್ಣ ರೋಣದ, ಆನಂದ ಬಂಡಿ, ಕಳಕಪ್ಪ ಹೊನವಾಡ ಇದ್ದರು.