

ಹುಣಸೂರು: ಹುಣಸೂರು-ಮೈಸೂರು ಹೆದ್ದಾರಿಯ ಜಡಗನಕೊಪ್ಪಲು ಬಳಿ ಶುಕ್ರವಾರ ಮುಂಜಾನೆ 3.30ರ ಸುಮಾರು ಸಿಮೆಂಟ್ ತುಂಬಿದ್ದ ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬಸ್ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಬಸ್‌ನಲ್ಲಿದ್ದ 13ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ತಾಲೂಕು ಪಾಲಮೊಕ್ಕಂನ ಶಂಷುದ್ದೀನ್(38), ಕ್ಯಾಲಿಕ್ಯಾಟ್ ಜಿಲ್ಲೆಯ ಕಾರನಕೂರು ಗ್ರಾಮದ ಕ್ಲೀನರ್ ಪ್ರಿಯೇಶ್(49) ಮೃತರು.
ಬಸ್‌ನಲ್ಲಿದ್ದ 13ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರೆ. ಜತೆಗೆ ಲಾರಿ ಚಾಲಕನಿಗೆ ಕಾಲು ಮುರಿದಿದೆ.
ಕೇರಳದ ಕೋಜಿಕೋಡ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಬೆಂಗಳೂರಿನಿಂದ ಹುಣಸೂರಿಗೆ ಎಸಿಸಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ 16 ಚಕ್ರದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಲಾರಿ ಹೆದ್ದಾರಿಗೆ ಮಗುಚಿ ಬಿದ್ದು, ಸಿಮೆಂಟ್‌ಮೂಟೆಗಳು ಚೆಲ್ಲಾಪಿಲ್ಲಿಯಾದವು. ಘಟನೆ ಕಂಡೊಡನೆ ಹಿಂದೆ ಬರುತ್ತಿದ್ದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಖಾಸಗಿ ವಾಹನಗಳ ಲಕ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಟ್ರಾಫಿಕ್ ಜಾಮ್: ಗುರುವಾರ ರಾತ್ರಿಯಿಂದ ಬೆಳಗಿನವರೆಗೆ ಸತತ ಮಳೆ ಸುರಿದ ಪರಿಣಾಮ ರಸ್ತೆ ಬದಿ ಮರ ಹೆದ್ದಾರಿಗೆ ಉರುಳಿತ್ತು. ಬಸ್ ಮರಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಕ್ಕೆ ತಿರುಗಿ ಲಾರಿಗೆ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ. ಹೆದ್ದಾರಿಗೆ ಅಡ್ಡಲಾಗಿ ಮಗುಚಿದ್ದ ಲಾರಿ ಹಾಗೂ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾದ ಬಸ್ ಹೆದ್ದಾರಿಯಲ್ಲೇ ಇದ್ದುದರಿಂದ ಹುಣಸೂರು-ಮೈಸೂರು ನಡುವೆ ವಾಹನಗಳ ಸಂಚಾರ ಸ್ಥಗಿತಗೊಂಡಿತು. ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಜನರು ಬಹುತೇಕ ಸಿಮೆಂಟ್ ಮೂಟೆಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಎಸ್‌ಪಿ ನಾಗೇಶ್, ಇನ್ಸ್‌ಪೆಕ್ಟರ್ ಮುನಿಯಪ್ಪ, ಬಿಳಿಕೆರೆ ಎಸ್‌ಐ ಲಕ್ಷ್ಮಿ ಹಾಗೂ ಪೊಲೀಸರು, ಸ್ಥಳಕ್ಕೆ ಕ್ರೇನ್ ಹಾಗೂ ಜೆಸಿಬಿ ತರಿಸಿ ಬೆಳಗ್ಗೆ 9ರ ವೇಳೆಗೆ ಎರಡು ವಾಹನಗಳನ್ನು ಪಕ್ಕಕ್ಕೆ ಸರಿಸಿದ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳದಲ್ಲಿ ಸೇರಿದ್ದ ನೂರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.