

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಕೈವಾಡದ ಆರೋಪದ ಮೇಲೆ ಶಿವಾಜಿನಗರ ಠಾಣೆ ಮುಖ್ಯಪೇದೆಯನ್ನು ಅಮಾನತು ಮಾಡಿ ಪೊಲೀಸ್ ಇಲಾಖೆ ಮಂಗಳವಾರ ಆದೇಶಿಸಿದೆ. ಶಿವಾನಗರ ಠಾಣೆಯ ಸೈಯದ್ ಸಮೀವುಲ್ಲಾ ಅಮಾನತುಗೊಂಡ ಮುಖ್ಯಪೇದೆ. ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಡಿ. ದೇವರಾಜ್, ನೀಡಿದ ವರದಿ ಆಧರಿಸಿ ಮುಖ್ಯಪೇದೆಯನ್ನು ಅಮಾನತು ಮಾಡಿರುವುದಾಗಿ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ವರ್ತೂರು ಹೋಬಳಿ ಸಾಲುಹುಣಸೆ ಗ್ರಾಮದಲ್ಲಿನ ಶೆಡ್‌ನಲ್ಲಿ ಕೂಲಿ ಕಾರ್ಮಿಕರು ನೆಲೆಸಿದ್ದರು. ಅಕ್ಟೋಬರ್ 29ರ ರಾತ್ರಿ 11 ಗಂಟೆಯಲ್ಲಿ ನಾಲ್ಕೈದು ಜನರ ಗ್ಯಾಂಗ್ ಶೆಡ್‌ಗೆ ನುಗ್ಗಿ ಗಲಾಟೆ ಮಾಡಿ ನಾವು ಪೊಲೀಸರು ಹಣ ನೀಡಬೇಕೆಂದು ಬೆದರಿಕೆ ಒಡ್ಡಿ ಹಲ್ಲೆ ಮಾಡಿ 6 ಮೊಬೈಲ್ ಫೋನ್ಗಳನ್ನು ದೋಚಿ ಪರಾರಿ ಆಗಿದ್ದರು. ನೊಂದ ವ್ಯಕ್ತಿ ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್ ಪೊಲೀಸರು ಡಕಾಯಿತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 4 ಆರೋಪಿಗಳನ್ನು ಬಂಧಿಸಿದ್ದರು.
ಬಂಧಿತರ ವಿಚಾರಣೆ ವೇಳೆ ಮುಖ್ಯಪೇದೆ, ಆರೋಪಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಕೃತ್ಯಕ್ಕೆ ಬೆಂಬಲ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ದೇವರಾಜ್ ಮೂಲಕ ಮುಖ್ಯಪೇದೆ ಕರ್ತವ್ಯ ಲೋಪದ ಬಗ್ಗೆ ಪೂರ್ವ ವಿಭಾಗ ಡಿಸಿಪಿಗೆ ವರದಿ ಒಪ್ಪಿಸಿದ್ದರು. ವರದಿ ಆಧರಿಸಿ ಡಾ.ಎಸ್.ಡಿ. ಶರಣಪ್ಪ, ಮುಖ್ಯಪೇದೆ ಸೈಯದ್ ಸಮೀವುಲ್ಲಾ ಎಂಬುವರನ್ನು ಅಮಾನತು ಮಾಡಿದ್ದಾರೆ.