

ಬೆಳಗಾವಿ: ಜಿಲ್ಲೆಯಾದ್ಯಂತ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಮಳೆಯ ಹಿನ್ನೆಲೆಯಲ್ಲಿ ಜಿಪಂ ಸಿಇಒ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನದಿಪಾತ್ರದ ಸ್ಥಳಗಳೂ ಸೇರಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿದ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ ನದಿಯಲ್ಲಿ 1.07 ಲಕ್ಷ ಕ್ಯೂಸೆಕ್, ಘಟಪ್ರಭಾ ನದಿಯಲ್ಲಿ 30 ಸಾವಿರ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಯಲ್ಲಿ 13.50 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಇದರಿಂದಾಗಿ ಆಲಮಟ್ಟಿ, ಹಿಡಕಲ್ ಮತ್ತು ನವಿಲುತೀರ್ಥ ಜಲಾಶಯಗಳಲ್ಲಿ ಕ್ರಮೇಣವಾಗಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಕುಡಿಯಲು ಹಾಗೂ ಬೆಳೆಗಳಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸುವುದಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ಕೂಡ ಗುರುತಿಸಲಾಗಿರುತ್ತದೆ. ತುರ್ತು ಕಾರ್ಯಾಚರಣೆಗೆ ಅಗತ್ಯವಿರುವ ಬೋಟ್ ಮತ್ತಿತರ ಸಲಕರಣೆಗಳು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಔಷಧ, ಜಾನುವಾರುಗಳಿಗೆ ಮೇವು ಸೇರಿ ಪ್ರತಿಯೊಂದು ವಿಷಯಗಳ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಸಂಬಂಧಿಸಿದ ಇಲಾಖೆಗಳು ಮಾಡಿಕೊಂಡಿವೆ ಎಂದರು.
ಅರಣ್ಯ ಪ್ರದೇಶದ ಫಾಲ್ಸ್ ಭೇಟಿಗೆ ನಿರ್ಬಂಧ:
ಸುರಕ್ಷತೆ ದೃಷ್ಟಿಯಿಂದ ಅರಣ್ಯ ಪ್ರದೇಶದೊಳಗಿರುವ ಫಾಲ್ಸ್ ಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ನಿಗಾ ವಹಿಸಲು ಅರಣ್ಯ ಇಲಾಖೆಯ ಗಾರ್ಡ್‌ಗಳು, ಪ್ರವಾಸಿಮಿತ್ರರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯ ಹದಿನೈದು ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ಸಾರ್ವಜನಿಕರ ಸಂಚಾರವನ್ನು ನಿರಗಬಂಧಿಸಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಹನ ಹಾಗೂ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ನದಿಪಾತ್ರದ ಜನರಿಗೆ ಎಚ್ಚರಿಕೆ:
ನಿಪ್ಪಾಣಿ ತಾಲ್ಲೂಕಿನ ವೇದಗಂಗಾ-ದೂಧಗಂಗಾ ನದಿಪಾತ್ರದಲ್ಲಿ ಪರಿಶೀಲನೆ ಕೈಗೊಂಡಿತು. ವೇದಗಂಗಾ-ದೂಧಗಂಗಾ ನದಿಗಳಲ್ಲಿ ಹೆಚ್ಚಿನ ಒಳಹರಿವು ಕಂಡುಬರುತ್ತಿದ್ದು, ಎರಡೂ ನದಿಗಳಲ್ಲಿ ಒಟ್ಟಾರೆ 24 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಆದ್ದರಿಂದ ಈ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಜಾನುವಾರುಗಳ ಸಮೇತ ಎತ್ತರದ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು. ತದನಂತರ ಯಡೂರ ಗ್ರಾಮದ ಬಳಿ ಅಧಿಕಾರಿಗಳು ಬೋಟ್‌ನಲ್ಲಿ ಸಂಚರಿಸಿ ನದಿತೀರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಜಿಪಂ ಸಿಇಒ ಹರ್ಷಲ್ ಭೋಯರ್, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಕಂದಾಯ, ನೀರಾವರಿ, ಪೊಲೀಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರಿದ್ದರು.