

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಜಾತಿ ಮತ್ತು ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಬುದ್ಧ, ಬಸವ ವಿಚಾರಧಾರೆಗಳನ್ನು ಅವರು ಹೊಂದಿದ್ದರು. ಎಲ್ಲರಿಗೂ ಸಮಾನತೆ ತಂದುಕೊಡುವಲ್ಲಿ ಶ್ರಮಿಸಿದ್ದರು ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿಯ ತಾಲೂಕು ಆಡಳಿತ ಸೌಧದ ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ, ತಹಶೀಲ್ದಾರ ಕಲಗೌಡ ಪಾಟೀಲ ಮಾತನಾಡಿದರು. ಅಂಬೇಡ್ಕರ್ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರು ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ. ರಾಮಪ್ಪ ಜಂಗನವಾರಿ ಉಪನ್ಯಾಸ ನೀಡಿದರು.
ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ.ಪಾಟೀಲ, ಅಪರ ತಹಶೀಲ್ದಾರ ಜಿ.ವಿ.ಪಾಟೀಲ, ಶಿವಾನಂದ ನಸಬಿ, ಮೀನಾಕ್ಷಿ ಗುದಗಿಯವರ, ಉಮೇಶ ಬೊಮ್ಮಕ್ಕನವರ, ಡಾ. ಪ್ರಹ್ಲಾದ ಗೆಜ್ಜಿ, ಶೋಭಾ ಬಳ್ಳಾರಿ, ಗೌರಮ್ಮ ಹರಿಜನ, ಮಂಜುಳಾ ಬೆನಗಿ, ಇತರರು ಇದ್ದರು.