

ಗಂಡಸಿ: ಹೋಬಳಿಯ ಜಕ್ಕನಹಳ್ಳಿ ಗ್ರಾಮದ ಸ್ವಾಮಿ ಎಂಬುವರ ತೋಟದ ಮನೆಗೆ ಬುಧವಾರ ರಾತ್ರಿ ಚಿರತೆಯೊಂದು ನುಗ್ಗಿದ್ದರಿಂದ ಕುಟುಂಬದವರು ಭಯಭೀತರಾಗಿದ್ದಾರೆ.
ಸ್ವಾಮಿ ಅವರ ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ದು, ಅದನ್ನು ಹಿಡಿಯಲು ಚಿರತೆ ಮುಂದಾಗಿದೆ. ಮನೆ ಮುಂದಿದ್ದ ನಾಯಿ ಚಿರತೆ ಕಂಡು ಹೆದರಿ ಮನೆ ಒಳಗೆ ಓಡಿ ಹೋಗಿದೆ. ನಾಯಿಯನ್ನು ಹಿಂಬಾಲಿಸಿದ ಚಿರತೆ ಸಹ ಮನೆ ಒಳಗೆ ನುಗ್ಗಿದ್ದರಿಂದ ಕುಟುಂಬದ ಸದಸ್ಯರು ಚಿರತೆಯನ್ನು ಕಂಡು ಭಯಭೀತರಾಗಿ ಜೋರಾಗಿ ಚೀರಾಡಿದ್ದಾರೆ. ಶಬ್ದದಿಂದ ವಿಚಲಿತಗೊಂಡ ಚಿರತೆ ಮನೆ ಹೊರಗೆ ಓಡಿ ಹೋಗಿ ಕತ್ತಲೆಯಲ್ಲಿ ಕಣ್ಮರೆಯಾಗಿದೆ. ಚಿರತೆ ಮನೆಯಿಂದ ಹೊರ ಹೋಗಿದ್ದರಿಂದ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.
ಗಂಡಸಿ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಗೆ ಹಲವು ಬಾರಿ ದೂರು ನೀಡಿದರೂ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಜಕ್ಕನಹಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ಚಿರತೆ ಸೆರೆಗೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.