ಮಾವನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿಬಿದ್ದ!

10_BGV_1 Lokesh Dalawai
Published on

ಮೂಡಲಗಿ/ಕುಲಗೋಡ: ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿರುವ ಸೋದರ ಮಾವನ ಮನೆಯಲ್ಲೇ ಇದ್ದುಕೊಂಡು ಅವರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಕುಲಗೋಡ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ ಟನೆ ಸೋಮವಾರ ನಡೆದಿದೆ.

ಮೂಲತ@ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದ ಲೋಕೇಶ ದಳವಾಯಿ (24) ಬಂಧಿತ. ಆರೋಪಿಯಿಂದ 18.15 ಲಕ್ಷ ರೂ. ಮೌಲ್ಯದ 191 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ತಂದೆ ಮೃತಪಟ್ಟ ನಂತರ ತಾಯಿಯ ಜತೆ ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದ ಪಾರ್ವತಿ ಹಳ್ಳೂರ ಅವರ ಮನೆಯಲ್ಲೇ (ಆರೋಪಿಯ ತಾಯಿಯ ತವರು ಮನೆ) ಕೆಲವು ವರ್ಷಗಳಿಂದ ಆರೋಪಿ ಲೋಕೇಶ ವಾಸವಿದ್ದ. ತನ್ನ ಖರ್ಚಿಗಾಗಿ ಮಾವನ ಮನೆಯಲ್ಲಿದ್ದ 18.15 ಲಕ್ಷ ರೂ. ಮೌಲ್ಯದ 191 ಗ್ರಾಂ ಚಿನ್ನಾಭರಣ ಕಳವು ಮಾಡಿ ಕೌಜಲಗಿಯ ರುದ್ರಭೂಮಿಯ ಮರವೊಂದರ ಕೆಳಗೆ ಮುಚ್ಚಿಟ್ಟಿದ್ದಾನೆ. ತನ್ನ ಕಣ್ಣಿಗೆ ತಾನೇ ಕಾರದ ಪುಡಿ ಹಾಕಿಕೊಂಡು, ಕೈಗೆ ಗಾಯಪಡಿಸಿಕೊಂಡು ಯಾರೋ ಮೂವರು ಕಳ್ಳರು ಮನೆಗೆ ನುಗ್ಗಿ ಕಳವು ಮಾಡಿದ್ದಾರೆ. ತಡೆಯಲು ಹೋದಾಗ ನನಗೆ ಕಾರದಪುಡಿ ಎರಚಿ, ಕೈಗೆ ಗಾಯ ಮಾಡಿದ್ದಾರೆ ಎಂದು ರಾತ್ರಿ ಮಲಗಿದ್ದ ಎಲ್ಲರನ್ನೂ ಎಬ್ಬಿಸಿ ಕತೆ ಕಟ್ಟಿ ನಂಬಿಸಿದ್ದಾನೆ. ಜೂ. 7ರಂದು ಅತ್ತಿಗೆ ಪಾರ್ವತಿ ಜತೆ ಆರೋಪಿ ಲೋಕೇಶ ಕುಲಗೋಡ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಅನುಮಾನಗೊಂಡು ಲೋಕೇಶನನ್ನೇ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ನಿಜಾಂಶ ಗೊತ್ತಾಗಿದೆ. ತಕ್ಷಣ ಬಚ್ಚಿಟ್ಟ ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕುಲಗೋಡ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕುಲಗೋಡ ಠಾಣೆಯಲ್ಲಿ ಜೂ. 7ರಂದು ದರೋಡೆ ಪ್ರಕರಣ ದಾಖಲಾಗಿತ್ತು. ಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಮನೆಯವರೇ ಕಳ್ಳತನ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಹಾಗಾಗಿ ಎಲ್ಲರನ್ನೂ ತನಿಖೆಗೆ ಒಳಪಡಿಸಿದಾಗ ಲೋಕೇಶ ತಾನೇ ಕದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಲೋಕೇಶ ಸಾಲ ತೀರಿಸಲು ಕಳುವು ಮಾಡಿದ್ದು, ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಬಗ್ಗೆ ಅನುಮಾನವಿದೆ. ತನಿಖೆ ಮಾಡಲಾಗುವುದು. ಡಾ. ಭೀಮಾಶಂಕರ ಗುಳೇದ ಬೆಳಗಾವಿ ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net