ಸಮಯದ ಸದ್ಬಳಕೆ, ಅಧ್ಯಯನಶೀಲತೆ ಅಗತ್ಯ

4 Dwd 2
Published on

ಧಾರವಾಡ: ವೃತ್ತಿ ಬದುಕಿನುದ್ದಕ್ಕೂ ಸಮಯದ ಸದ್ಬಳಕೆಗೆ ಮೊದಲ ಆದ್ಯತೆ ನೀಡಿ ನಿರಂತರ ಅಧ್ಯಯನಶೀಲತೆಯೊಂದಿಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ವೃತ್ತಿ ಮೌಲ್ಯಗಳನ್ನು ಅರಿತು ತರಗತಿಗಳಲ್ಲಿ ಕ್ರಿಯಾಶೀಲ ಬೋಧನೆಗೆ ತೆರೆದುಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಚಿದಂಬರ ಹೇಳಿದರು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ನಗರದ ಡಯಟ್ ಸಭಾಭವನದಲ್ಲಿ ನೂತನವಾಗಿ ನೇಮಕಗೊಂಡ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರೇರಣಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶಿಷ್ಟ ಬೋಧನಾ ವಿಧಾನಗಳು, ವೃತ್ತಿ ಬದುಕಿನಲ್ಲಿ ಕ್ರಿಯಾ ಸಂಶೋಧನೆ ರೂಢಿಸಿಕೊಳ್ಳುವುದು, ಮೌಲ್ಯಮಾಪನದ ಮಹತ್ವ ಅರಿಯುವುದು, ಇಲಾಖೆಯ ರಚನೆ ಮತ್ತು ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಉಪನ್ಯಾಸಕ ಹುದ್ದೆಯ ವೃತ್ತಿಗೆ ಪೂರಕವಾದ ಅಂಶಗಳನ್ನು ಅರಿಯಲು ಈ ತರಬೇತಿ ಮಾರ್ಗದರ್ಶನ ಮಾಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪ ನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಮಾತನಾಡಿ, ‘ಸರ್ಕಾರಿ ಸೇವೆಯ ಎಲ್ಲ ಸೂಕ್ಷ್ಮ ನಿಯಮಾವಳಿಗಳನ್ನು ತಳರ್ಸ³ಯಾಗಿ ಅಧ್ಯಯನ ಮಾಡಿ ಉಪನ್ಯಾಸಕ ವೃತ್ತಿಯ ಘನತೆ ಅರಿತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು’ ಎಂದರು.

ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಕರಡಿಗುಡ್ಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಂ. ಯಲಿಗಾರ, ಡಯಟ್ ಉಪನ್ಯಾಸಕಿ ವಿಜಯಲಕ್ಷ್ಮೀ ಹಂಚಿನಾಳ ಇತರರು ಉಪಸ್ಥಿತರಿದ್ದರು.

ಜಿಲ್ಲಾ ನೋಡಲ್ ಅಧಿಕಾರಿ ಪಾರ್ವತಿ ವಸ್ತ್ರದ ಸ್ವಾಗತಿಸಿದರು. ಎಸ್.ಟಿ. ಅರಸನಾಳ ನಿರೂಪಿಸಿದರು. ತಬಸ್ಸುಂ ಪಟ್ಟಣದ ವಂದಿಸಿದರು. ಧಾರವಾಡ ಜಿಲ್ಲೆಯ 18 ಹಾಗೂ ಉತ್ತರ ಕನ್ನಡ ಜಿಲ್ಲೆಯ 22 ಉಪನ್ಯಾಸಕರು ಪಾಲ್ಗೊಂಡಿದ್ದಾರೆ. ಮನೋವೈದ್ಯ ಡಾ. ಆನಂದ ಪಾಂಡುರಂಗಿ ಉಪನ್ಯಾಸಕರ ಜೊತೆ ಸಂವಾದ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net