

ಶಿವಮೊಗ್ಗ: ನಗರದ ಹೊರವಲಯದ ವಡ್ಡಿನಕೊಪ್ಪದಲ್ಲಿ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಮಹಿಳೆಗೆ ಆಯುಧದಿಂದ ಇರಿದು ಕೊಲೆಗೆ ಯತ್ನಿಸಿದ್ದು, ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಡ್ಡಿನಕೊಪ್ಪದ ಸವಿತಾ(35) ಗಂಭೀರವಾಗಿ ಗಾಯಗೊಂಡವರು. ಶಿವನಾಯ್ಕ(35) ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಿತಾ ಹಾಗೂ ಶಿವನಾಯ್ಕ ಇಬ್ಬರಿಗೂ ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿದ್ದು, ಆ ಬಳಿಕ ಸ್ನೇಹ, ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇಬ್ಬರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ಬಳಿಕ ಸವಿತಾ, ಶಿವನಾಯ್ಕನನ್ನು ದೂರ ಮಾಡಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಸವಿತಾ ಅವರ ಪತಿ ಮನೆಯಿಂದ ಹೋಗಿರುವುದನ್ನು ಖಚಿತಪಡಿಸಿಕೊಂಡ ಶಿವನಾಯ್ಕ, ಮನೆಗೆ ನುಗ್ಗಿ ಸವಿತಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ತಾನೂ ಅದೇ ಮನೆಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ