ಮಳೆಗಾಗಿ ಪ್ರಾರ್ಥಿಸಿ ಹೀಗೂ ಮಾಡಿದರು!

GOMBE MADUVE
Published on

ಗಜೇಂದ್ರಗಡ: ಮುಂಗಾರು ಮುನಿಸಿಕೊಂಡಿದ್ದರಿಂದ ಕಂಗಾಲಾದ ಜನರು ಶೀವನ ದೇವಸ್ಥಾನಗಳಲ್ಲಿ ಶಿವನಾಮ ಸ್ಮರಣೆ ಮಾಡಿದರು. ಗುರ್ಜಿ ಪೂಜೆ, ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಮಾಡಿಸಿ ಭರ್ಜರಿ ಮೆರವಣಿಗೆ ಮಾಡಿದರು. ಆದರೂ ವರುಣದೇವ ಕಣ್ಣು ತೆರೆಯುತ್ತಿಲ್ಲ.

ಹೀಗಾಗಿ ಗಜೇಂದ್ರಗಡದಲ್ಲಿ ಹಳೆಯ ಸಂಪ್ರದಾಯಗಳಲ್ಲಿ ಒಂದಾದ ಗೊಂಬೆಗಳ ಮದುವೆ ಕೂಡ ಮಾಡಲಾಗಿದೆ.

ಪಟ್ಟಣದ ಮೈಸೂರಮಠದಲ್ಲಿ 18 ಮತ್ತು 19ನೇ ವಾರ್ಡಿನ ನಿವಾಸಿಗಳು ಸೇರಿ ಗೊಂಬೆ ಮದುವೆ ಮಾಡಿ ವರುಣ ಕೃಪೆಗಾಗಿ ಪ್ರಾರ್ಥಿಸಿದರು.

ವಧು ಮತ್ತು ವರನ ಕಡೆಯ ಬೀಗರು ಸೇರಿ ದೇವಸ್ಥಾನವನ್ನು ಅಲಂಕರಿಸಿದ್ದರು. ಮದುವೆಯ ರೀತಿಯಲ್ಲಿ ವಾದ್ಯ ಸಮೇತ ಹಾಲಗಂಬವನ್ನು ತಂದು ನಿಲ್ಲಿಸಿದರು.

ಪರಸ್ಪರರು ಕಂಕಣ ಕಟ್ಟಿಕೊಂಡರು. ಗೊಂಬೆಗಳಿಗೆ ಅರಿಷಿಣ ಲೇಪನ ಕಾರ್ಯ, ಗಂಗಾ ಪೂಜೆ ಮಾಡಿ ಸುರಗಿ ಎರೆದು ಹೊಸ ಬಟ್ಟೆಗಳನ್ನು ಹಾಕಿ ಸಿಂಗರಿಸಿದರು.

ಅಕ್ಷತಾರೋಪಣ ಸಮಯ ಗಟ್ಟಿಮೇಳ ವಾದ್ಯಗಳೊಂದಿಗೆ ತಾಳಿಕಟ್ಟುವ ಸಂಪ್ರದಾಯ ಆಚರಿಸಿದರು. ಬಳಿಕ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಶಾಂತಯ್ಯ ಶಾಂತಗೇರಿಮಠ ಅರ್ಚಕರಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಹಾದೇವಪ್ಪ ಪವಾರ, ಪರಸಪ್ಪ ಸಂಗಮದ, ಸುಲೇಮಾನ ಮೋಮಿನ, ಗುಂಡಪ್ಪ ಪಲ್ಲೇದ, ಬಸವರಾಜ ಹೂಗಾರ, ಮಹಾದೇವಪ್ಪ ಯಂಕಂಚಿ, ಅಶೋಕ ಹೂಗಾರ, ದೇಚಪ್ಪ ನರಗುಂದ, ಖಾಜಾಸಾಬ ನಿಲೂಗಲ್, ದರೇಸಾಬ ಮೋಮಿನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net