ಸನ್ಯಾಸ ದೀಕ್ಷೆ ಪಡೆಯಲು ಮುಂದೆ ಬರುತ್ತಿಲ್ಲ

mysore
Published on

ಮೈಸೂರು: ಈಗ ಸನ್ಯಾಸ ದೀಕ್ಷೆ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.


ವಿಜಯನಗರ 2ನೇ ಹಂತದಲ್ಲಿನ ಕೊಡಗು ಗೌಡ ಸಮಾಜದ ನೂತನ ಸಭಾಂಗಣವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಸಂತ ಪರಂಪರೆ ಮುಂದುವರಿಸಲು ಸನ್ಯಾಸಿಗಳೇ ಸಿಗುವುದು ಕಷ್ಟಕರವಾಗಿದೆ. ಆಧ್ಯಾತ್ಮಿಕತೆಯಿಂದ ಯಾರಾದರೂ ಮುಂದೆ ಬಂದರೆ ಅವರನ್ನು ಕುಟುಂಬದವರು ಸೇರಿದಂತೆ ಬಂಧು-ಬಳಗದವರೇ ಸನ್ಯಾಸಿ ಆಗುವುದು ಬೇಡವೆಂದು ಹೇಳುತ್ತಾರೆ ಎಂದರು.


ನಾನು ಕೂಡ ಸನ್ಯಾಸ ದೀಕ್ಷೆ ಪಡೆಯಲು ಮುಂದಾದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಮೈಸೂರಿನ ಶ್ರೀಗಳಾದ ಸೋಮೇಶ್ವರನಾಥ ಸ್ವಾಮೀಜಿ ಮನೆಯನ್ನೇ ಬಿಟ್ಟು ಬರುವಂತೆ ಆಯಿತು. ಈ ರೀತಿ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದಿಗ್ಧತೆಯಿಂದ ಸಂತ ಪರಂಪರೆ ಮುಂದುವರಿಸಲು ಸನ್ಯಾಸಿಗಳು ಸಿಗಲು ಅಡ್ಡಿಯಾಗಿದೆ. ಯಾರಾದರೂ ಸಮಾಜದೊಂದಿಗೆ ಸಮುದಾಯ ಸೇವೆ ಮಾಡಬೇಕೆಂಬ ಆಸಕ್ತಿ ಇದ್ದರೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಮಠಕ್ಕೆ ಬರಬೇಕು ಎಂದು ಬಹಿರಂಗವಾಗಿ ಆಹ್ವಾನವನ್ನೂ ನೀಡಿದರು.


ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮುಖಂಡ ಕವೀಶ್ ಗೌಡ, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್, ಕೊಡಗು ಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಈ.ಮನೋಹರ್, ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ, ತೇನನ ರಾಜೇಶ್, ಕಡ್ಯದ ರಕ್ಷಿತ್ ಭೀಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net