

ಸಿರಿಗೆರೆ: ಹಿರಿಯ ಗುರುಗಳಾದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳಿಗೆ ಅವರೇ ಸರಿಸಾಟಿ ತರಳಬಾಳು ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರೋಪ ಸಮಾರಂಭ ಹಾಗೂ ರೈತರ ಸಮಾವೇಶದಲ್ಲಿ ಮಾತನಾಡಿ, ಹಿರಿಯ ಶ್ರೀಗಳ ವ್ಯಕ್ತಿತ್ವವನ್ನು ಯಾರೊಂದಿಗೆ ಹೋಲಿಸಲಾಗದು ಎಂದು ಕೋರಿದರು.
ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಸಮಾಜವನ್ನು ಕಟ್ಟಿದ ಕ್ರಾಂತಿಪುರುಷರು. ವ್ಯವಹಾರಿಕ ಜ್ಞಾನದ ಜತೆಗೆ ಮಾತೃ ಹೃದಯ ಅವರಲ್ಲಿ ಇತ್ತು. ಹಿರಿಯ ಶ್ರೀಗಳು ಸೀನಿದರೆ ವಿಧಾನಸೌಧ ನಡುಗುವುದು ಎಂಬ ಮಾತಿತ್ತು ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಹಿರಿಯ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ. ಮಗುವಿದ್ದಾಗಿನ ಮುಗ್ಧತೆಯನ್ನು ಜೀವನವೀಡಿ ಉಳಿಸಿಕೊಳ್ಳುವುದು ಅಸಾಧ್ಯ. ನಾವು ಬೆಳೆದಂತೆ ಆತ್ಮಸಾಕ್ಷಿಯಾಗಿ ನಡೆದು ಕೊಳ್ಳುವುದು ಕಷ್ಟ. ಈ ಎರಡೂ ಸಾಧನೆಗಳನ್ನು ಶಿವಕುಮಾರ ಸ್ವಾಮೀಜಿ ಸಾಧಿಸಿದ್ದರು ಎಂದು ಹೇಳಿದರು.
ನ್ಯಾಯದ ಪರ ಕೆಲಸ ಮಾಡುತ್ತಿರುವ ತರಳಬಾಳು ಪೀಠದಂತಹ ಮಠ ದೇಶದಲ್ಲಿ ಮತ್ತೊಂದಿಲ್ಲ. ಬರಗಾಲದಲ್ಲೂ ನಾಲ್ಕಾರು ಬೆಳೆಗಳನ್ನು ಕಾಣಲು ಸಾಧ್ಯವಾಗಿದೆ ಎಂದರೆ ಇದಕ್ಕೆ ಡಾ. ಶ್ರೀ ಶಿವಮೂರ್ತಿ ಶ್ರೀಗಳ ದೂರದೃಷ್ಟಿ ಕಾರಣವಾಗಿದೆ ಎಂದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಭಾಷಣಗಳಿಂದ ರೈತರ ಪರಿಸ್ಥಿತಿ ಸುಧಾರಣೆ ಆಗದು. ಸರ್ಕಾರಗಳು ರೈತಪರ ಕಾರ‌್ಯಕ್ರಮಗಳ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿವೆ. ಪರಿಣಾಮ ರೈತನಿಗೆ ಹೆಣ್ಣು ಕೊಡುತ್ತಿಲ್ಲ ಎಂದು ವಿಷಾಧಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಲಿಂಗೈಕ್ಯ ಶ್ರೀಗಳು ಸಮಾಜದ ಅಸಮಾನತೆ ನಿವಾರಿಸಿದ ಸಿದ್ಧಿಪುರುಷರು. ಲಿಂಗಾಯತ-ವೀರಶೈವ ಮಠಗಳು ಜ್ಞಾನ, ಅನ್ನ ದಾಸೋಹಕ್ಕೆ ಒತ್ತು ನೀಡಿವೆ. ಸಿರಿಗೆರೆ ಮಠ ಎಲ್ಲ ವರ್ಗದವರಿಗೂ ಶಿಕ್ಷಣ ನೀಡುತ್ತಿದೆ ಎಂದರು.
ಇನ್‌ಸೈಟ್ ಐಎಎಸ್ ಕೋಚಿಂಗ್ ಸೆಂಟರ್ ಸ್ಥಾಪಕ ವಿನಯ್‌ಕುಮಾರ್ ಮಾತನಾಡಿ, ಶ್ರೀಮಠದಿಂದ ಸಿರಿಗೆರೆ, ದಾವಣಗೆರೆ ಅಥವಾ ಬೆಂಗಳೂರಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸುವುದಾದರೆ ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಬಿ.ವೈ.ವಿಜಯೇಂದ್ರ, ಯು.ಬಿ.ಬಣಕಾರ, ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್,ಬೆಂಗಳೂರಿನ ಇನ್‌ಸೈಟ್ ಐಎಎಸ್ ಕೋಚಿಂಗ್ ಸೆಂಟರ್ ಸ್ಥಾಪಕ ವಿನಯ್‌ಕುಮಾರ್ ಮಾತನಾಡಿದರು.
ಶಾಸಕ ಎಂ.ಚಂದ್ರಪ್ಪ, ತರಳಬಾಳು ವಿದ್ಯಾಸಂಸ್ಥೆ ಪ್ರಧಾನ ಕಾರ‌್ಯದರ್ಶಿ ಎಸ್.ಪಿ.ರಂಗನಾಥ್, ಆಡಳಿತಾಧಿಕಾರಿ ವಾಮದೇವಪ್ಪ ಇದ್ದರು.
ತರಳಬಾಳು ಸಿಬಿಎಸ್‌ಸಿ ಶಾಲೆ, ದಾವಣಗೆರೆ ನಮಿತಾ ತಂಡದ ಸದಸ್ಯರು ಭರತನಾಟ್ಯ ಪ್ರದರ್ಶಿಸಿದರು. ಸಮಾರಂಭಕ್ಕೂ ಮೊದಲು ಶ್ರೀಗಳು ಧ್ವಜಾರೋಹಣ ನೆರವೇರಿಸಿದರು.