ಚಿಕ್ಕಬಳ್ಳಾಪುರ : ಮದುವೆಯಾಗುವುದಾಗಿ ಹೇಳಿ ಯಾರನ್ನೂ ವಂಚಿಸಿಲ್ಲ. ಆದರೆ, ಆನ್‌ಲೈನ್ ಮೂಲಕ ಸಂಪರ್ಕಿಸಿ, ನನ್ನೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಮುಂದಾದವರೇ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ವಂಚನೆಯ ಆರೋಪಿ ಎನ್ನಲಾದ ಕೋಮಲಾ ಎಂಬಾಕೆ ಅಳಲು ತೋಡಿಕೊಂಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಕೋಮಲಾ, ಆನ್‌ಲೈನ್‌ನಲ್ಲಿ ಅಪರಿಚಿತರನ್ನು ನಂಬಿ, ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಜತೆಗೆ ತೇಜೋವಧೆಯಿಂದ ಹಿಂಸೆ ಅನುಭವಿಸಬೇಕಾಯಿತು ಎಂದು ಕಣ್ಣೀರು ಹಾಕಿದರು.
ಬೆಂಗಳೂರಿನಲ್ಲಿ ಬೆಸ್ಕಾಂ ನೌಕರರಾಗಿದ್ದ ಮೊದಲ ಪತಿ ಮೃತಪಟ್ಟ ಬಳಿಕ ಜೀವನಕ್ಕೆ ಆಸರೆ ಪಡೆಯಲು ವಿವಾಹ ನೋಂದಣಿಯ ಖಾಸಗಿ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲಾಗಿತ್ತು. ಇದಕ್ಕೆ ಮಧುಸೂದನ್ ಕಿಶೋರ್ ಸಂಪರ್ಕಕ್ಕೆ ಬಂದು, ಬಳಿಕ ಇಬ್ಬರು ಒಪ್ಪಿಗೆಯಿಂದ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಎರಡೇ ತಿಂಗಳಿಗೆ ಹಣದ ಕಿರುಕುಳಕ್ಕೆ ಗಂಡನ ಮನೆ ಬಿಡಬೇಕಾಯಿತು. ಇದಾದ ಬಳಿಕ ಸಂಪರ್ಕಕ್ಕೆ ಬಂದ ಗೌರಿಬಿದನೂರಿನ ರಾಘವೇಂದ್ರ, ಸ್ನೇಹಿತರಾಗಿ ಸಹಾಯ ಮಾಡಿ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಉತ್ತಮ ಆರ್ಥಿಕ ಸ್ಥಿತಿಯ ಕುಟುಂಬದಲ್ಲಿ ಜನಿಸಿದ ನನಗೆ ಇತರರ ಹಣವನ್ನು ಪಡೆದು ವಂಚಿಸುವ ಯೋಚನೆ ಇಲ್ಲ. ಎರಡನೇಯ ಪತಿಯ ಕುಟುಂಬಸ್ಥರು ಹಣಕ್ಕಾಗಿ ಕಿರುಕುಳ ನೀಡಿದರು. ಸ್ನೇಹಿತರಾಗಿ ಪರಿಚಯವಾದ ವ್ಯಕ್ತಿ, ಸ್ವಯಂ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿ, ವಂಚನೆಯ ಆರೋಪ ಹೊರಿಸಿದ್ದಾರೆ. ಇದನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಮಹಿಳಾ ಆಯೋಗಕ್ಕೆ ನ್ಯಾಯಕ್ಕಾಗಿ ಸಮರ್ಥನೆಯ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ
ಹಲವರಿಗೆ ಮದುವೆಯಾಗುವುದಾಗಿ ಹೇಳಿ ಹಣವನ್ನು ಪಡೆದು ವಂಚಿಸಿದ್ದಾಳೆ ಎಂದು ಕೋಮಲಾ ವಿರುದ್ಧ ಇಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಮಹಿಳೆಯನ್ನು ಬಂಧಿಸಿದ್ದರು. ಪ್ರಕರಣವು ರಾಜ್ಯಾದ್ಯಂತ ಚರ್ಚೆಯಾಗಿತ್ತು. ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.