ಹುಧಾ ವಿಸ್ತರಿತ ಎಲ್ ಪಿಎಗೆ ಅನುಮೋದನೆ,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸನದಿ ಮಾಹಿತಿ

IMG_20250923_113641_303.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸ್ಥಳಿಯ ಯೋಜನಾ ಪ್ರದೇಶಕ್ಕೆ (ಎಲ್.ಪಿ.ಎ- ಲೋಕಲ್ ಪ್ಲಾನಿಂಗ್ ಏರಿಯಾ) ತಾಲೂಕಿನ 13 ಗ್ರಾಮ, ಕಲಘಟಗಿ ತಾಲೂಕಿನ 6 ಮತ್ತು ಧಾರವಾಡ ತಾಲೂಕಿನ 27 ಗ್ರಾಮಗಳು ಸೇರಿ ಹೊಸದಾಗಿ 46 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ ತಿಳಿಸಿದರು.

ಇಲ್ಲಿಯ ನವನಗರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಸೇರ್ಪಡೆಯಾದ ಹಳ್ಳಿಗಳನ್ನು ನಿಯಮಾನುಸಾರ ಅಭಿವೃದ್ಧಿ ಪಡಿಸಿ, ಅವಳಿ ನಗರದ ನಾಗರಿಕರಿಗೆ ಸುಸಜ್ಜಿತ ಬಡಾವಣೆ, ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಎಲ್ ಪಿಎ ಅಡಿ ಹುಬ್ಬಳ್ಳಿ ತಾಲೂಕಿನ 21 ಹಾಗೂ ಧಾರವಾಡ ತಾಲೂಕಿನ 25 ಗ್ರಾಮಗಳು ಸೇರಿ ಒಟ್ಟು 46 ಗ್ರಾಮಗಳು ಇವೆ. ಹೊಸದಾಗಿ 46 ಗ್ರಾಮಗಳು ಸೇರಿದ್ದರಿಂದ ಒಟ್ಟು 92 ಹಳ್ಳಿಗಳು ಯೋಜನಾ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಯಾದಂತಾಗಿದೆ ಎಂದರು.

ಯೋಜನಾ ಪ್ರದೇಶಕ್ಕೆ ಒಳಪಡುವ ಪ್ರತಿ ಹಳ್ಳಿಗೂ ರಿಂಗ್ ರೋಡ್ ನಿರ್ಮಿಸುವ ಉದ್ದೇಶವಿದೆ. ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಹಾಕಿಕೊಳ್ಳಲಾಗಿದೆ. ಒಟ್ಟಾರೆ, ಅವಳಿನಗರದ ಸುವ್ಯವಸ್ಥಿತ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಯೋಜನಾ ಪ್ರದೇಶ ವಿಸ್ತರಣೆಯಿಂದ ಮುಂಬರುವ ದಿನಗಳಲ್ಲಿ ಜಮೀನು ಹಾಗೂ ನಿವೇಶನಗಳ ಬೆಲೆ ಒಂದಿಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎಂದರು.

ಕೈಗಾರಿಕೆ ಮತ್ತು ನಗರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಇತರ ನಗರಗಳ ಮೂಲಸೌಕರ್ಯ, ಬಡಾವಣೆ ನಿರ್ಮಾಣದ ಬಗ್ಗೆ ಅಧ್ಯಯನ ಮಾಡಲಾಗಿದೆ. ಅಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ವ್ಯವಸ್ಥಿತ ನಗರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಕೀರ್ ವಿವರಿಸಿದರು.

ಅಕ್ರಮ ಲೇಔಟ್:
ಅವಳಿನಗರದಲ್ಲಿ ಸುಮಾರು 176 ಅನಧಿಕೃತ ಲೇಔಟ್ ಗಳನ್ನು ಗುರುತಿಸಿ ನೋಟೀಸ್ ನೀಡಲಾಗಿದೆ. ಅಕ್ರಮ ಲೇಔಟ್ ನಿರ್ಮಾಣ ತಡೆಯಲು ಶೀಘ್ರ ತೆರವು ಕಾರ್ಯಾಚರಣೆ ಕೂಡ ಕೈಗೊಳ್ಳಲಾಗುವುದು. ಯಾರೊಬ್ಬರೂ ಅಕ್ರಮ ಲೇಔಟ್ ನಲ್ಲಿ ನಿವೇಶನ ಕೊಳ್ಳಬಾರದು ಎಂದು ಮನವಿ ಮಾಡಿದರು.

ರಿಂಗ್ ರೋಡ್:
ಕುಸುಗಲ್ ನಿಂದ ಸುಳ್ಳ, ಬ್ಯಾಹಟ್ಟಿ ಮೂಲಕ ಧಾರವಾಡ ಹೈಕೋರ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಸೇರಿಸುವ ಇನ್ನರ್ಧ ರಿಂಗ್ ರಸ್ತೆಗಾಗಿ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಇದು ಕಾರ್ಯ ರೂಪಕ್ಕೆ ಬಂದರೆ ಅವಳಿನಗರಕ್ಕೆ ಪೂರ್ಣ ರಿಂಗ್ ರೋಡ್ ಲಭ್ಯವಾಗಲಿದೆ ಎಂದು ಸನದಿ ತಿಳಿಸಿದರು.

ಹಳ್ಳಿ ರಸ್ತೆ ಅಗಲೀಕರಣ:
ಪ್ರಾಧಿಕಾರದ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಮಾತನಾಡಿ, ಪ್ರಾಧಿಕಾರ ವ್ಯಾಪ್ತಿಯ ಹಳ್ಳಿಗಳಲ್ಲಿ ಸುಸಜ್ಜಿತ ಬಡಾವಣೆ ಅಭಿವೃದ್ಧಿ ಹಾಗೂ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಮಾಸ್ಟರ್ ಪ್ಲಾನ್ ಗೆ ತಕ್ಕಂತೆ ಸರಿಪಡಿಸಲು ಯತ್ನಿಸಲಾಗುವುದು. ಯೋಜನಾ ಪ್ರದೇಶದ ಹಳ್ಳಿಗಳ ರಸ್ತೆಗಳನ್ನು 15 ಇಲ್ಲವೇ 18 ಮೀಟರ್ ಅಗಲೀಕರಣ ಮಾಡಲಾಗುವುದು.

ಹುಡಾದಿಂದಲೂ ಹೊಸ ಲೇಔಟ್ ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯರಾದ ಯಾಜ್ ಅಹ್ಮದ್ ಕಲಘಟಗಿ, ಮಂಜುನಾಥ ಭೋವಿ, ವಿಜಯಾನಂದ ಶೆಟ್ಟಿ, ಸುನೀತಾ ಹುರಕಡ್ಲಿ, ನಗರ ಯೋಜಕ ಸದಸ್ಯ ಮಹಾಂತೇಶ ಪೂಜಾರ, ಇಂಜಿನಿಯರ್ ಗಳಾದ ಬಸವರಾಜ ದೇವಗಿರಿ, ಮುಕುಂದ ಜೋಶಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net