

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪೌರಾಡಳಿತ ನಿರ್ದೇಶನಾಲಯದಿಂದ ನಾನ್ ಮಿಲಿಯನ್ ಸಿಟಿ (10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರ) ಯೋಜನೆಯಡಿ ಮರು ಹಂಚಿಕೆಯಾದ ಅನುದಾನದಲ್ಲಿ ಹೊಸದಾಗಿ 100 ಆಟೋ ಟಿಪ್ಪರ್ಗಳನ್ನು ಖರೀದಿಸಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ಗಣರಾಜ್ಯೋತ್ಸವ ನಿಮಿತ್ತ ಇಲ್ಲಿಯ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಪಾಲಿಕೆ ವತಿಯಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸದ್ಯ ಪಾಲಿಕೆ ಬಳಿ ಮನೆ ಮನೆಯಿಂದ ಕಸ ಸಂಗ್ರಹಕ್ಕೆ 216 ಆಟೋ ಟಿಪ್ಪರ್ಗಳಿವೆ. ನಾನ್ ಮಿಲಿಯನ್ ಸಿಟಿ ಯೋಜನೆಯಡಿ ಪಾಲಿಕೆಗೆ 16.73 ಕೋಟಿ ರೂ. ಅನುದಾನ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೆಕ್ಷಣೆಯಲ್ಲಿ ಹು-ಧಾ ಅವಳಿ ನಗರ ರಾಜ್ಯದಲ್ಲಿ 2ನೇ ಹಾಗೂ ದೇಶದಲ್ಲಿ 87ನೇ ಸ್ಥಾನ ಪಡೆದಿದೆ ಎಂದರು.
ರಾಷ್ಟ್ರೀಯ ಶುದ್ಧ ಗಾಳಿ (ಎನ್ಸಿಎ) ಯೋಜನೆಯಡಿ ಪಾಲಿಕೆಗೆ ಮೊದಲ ಹಂತದಲ್ಲಿ 13.79 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 5.41 ರೂ. ಮಂಜೂರಾಗಿದೆ. ಅವಳಿ ನಗರದ ಪರಿಸರದಲ್ಲಿನ ಧೂಳಿನ ಪ್ರಮಾಣವನ್ನು ಕಡಿಮೆ ಮಾಡಲು ಈ ಹಣವನ್ನು ಬಳಕೆ ಮಾಡಲಾಗುವುದು. ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ನಜೀರ ಅಹ್ಮದ್ ಹೊನ್ಯಾಳ, ಶೀಲಾ ಕಾಟ್ಕರ್, ಇತರರು ಇದ್ದರು. ಪಿಆರ್ಒ ಎಸ್.ಸಿ. ಬೇವೂರ ವಂದಿಸಿದರು.
ಪಾಲಿಕೆ ಕಚೇರಿ
ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಮೇಯರ್ ವೀಣಾ ಬರದ್ವಾಡ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದ, ಪ್ರಗತಿಪರ ಭಾರತವನ್ನು ರೂಪಿಸಿದ ಶಿಲ್ಪಿಗಳನ್ನು ಗೌರವಿಸುವ ದಿನವಿದು. ನಾವೆಲ್ಲರೂ ಅಖಂಡ ಭಾರತದ ಐಕ್ಯತೆ, ಸಾರ್ವಭೌಮತೆ ಎತ್ತಿ ಹಿಡಿಯಬೇಕು. ಭಾರತವನ್ನು ಆಧುನಿಕ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸೋಣ ಎಂದು ಮೇಯರ್ ಹೇಳಿದರು.
ಹೊಸದಾಗಿ ಧ್ವಜ ಕಟ್ಟೆ ನಿರ್ವಿುಸಿದ ಗುತ್ತಿಗೆದಾರ ಶ್ರೀನಿವಾಸ ಹಾಗೂ ಕಿರಿಯ ಇಂಜಿನೀಯರ್ ಸುನೀಲ ಆಲೋರೆ ಅವರನ್ನು ಸನ್ಮಾನಿಸಲಾಯಿತು.