ಗುಂಡೂರ, ಖಂಡೇಕಾರ, ಇಂಡಿ ಆಯ್ಕೆ

standing committee
Published on

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ 3 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ನಿತೀನ ಇಂಡಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಬೀರಪ್ಪ ಖಂಡೇಕಾರ ಹಾಗೂ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಮಲ್ಲಿಕಾರ್ಜುನ ಗುಂಡೂರ ಅವಿರೋಧವಾಗಿ ಆಯ್ಕೆಯಾದರು.

ಮೇಯರ್ ವೀಣಾ ಬರದ್ವಾಡ ಅಧ್ಯಕ್ಷತೆಯಲ್ಲಿ ಇಲ್ಲಿಯ ಪಾಲಿಕೆ ಸಭಾಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತಾಂತ್ರಿಕ ಕಾರಣಗಳಿಂದ ಲೆಕ್ಕಗಳ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆಯಲಿಲ್ಲ. ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಮೇಯರ್ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಉಪ ಮೇಯರ್ ಸತೀಶ ಹಾನಗಲ್, ಸಭಾನಾಯಕ ಶಿವು ಹಿರೇಮಠ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಉಮೇಶಗೌಡ ಕೌಜಗೇರಿ, ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪರಿಷತ್ ಕಾರ್ಯದರ್ಶಿ ಗುರುಸಿದ್ದಪ್ಪ ಡಂಬಳ, ಇತರರು ಇದ್ದರು.

ಆ. 17ರಂದು ಧಾರವಾಡದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಅಧ್ಯಕ್ಷತೆಯಲ್ಲಿ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ನಡೆದಿತ್ತು. ಪ್ರತಿ ಸ್ಥಾಯಿ ಸಮಿತಿಯಲ್ಲಿ ಆಡಳಿತರೂಢ ಬಿಜೆಪಿಯ ನಾಲ್ವರು ಹಾಗೂ ಕಾಂಗ್ರೆಸ್ಸಿನ ಮೂವರು ಸದಸ್ಯರಿದ್ದಾರೆ. ಜುಲೈ 10ರಂದೇ ಹಿಂದಿನ ಸ್ಥಾಯಿ ಸಮಿತಿಗಳ ಅವಧಿ ಪೂರ್ಣಗೊಂಡಿತ್ತು.

ಲೆಕ್ಕಗಳ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಇಂದು ನಡೆಯಲಿಲ್ಲ. ಸದಸ್ಯರ ಆಯ್ಕೆ ವೇಳೆ ಬಿಜೆಪಿಯ ರತ್ನಾಬಾಯಿ ನಾಝುರೆ ಅವರ ನಾಮಪತ್ರವು ಕ್ರಮಬದ್ಧವಾಗಿಲ್ಲದ್ದರಿಂದ ತಿರಸ್ಕೃತಗೊಂಡಿತ್ತು. ಈ ಒಂದು ಸದಸ್ಯ ಸ್ಥಾನಕ್ಕೆ ಆಯ್ಕೆ ಚುನಾವಣೆ ನಡೆದ ಮೇಲೆಯೇ ಅಧ್ಯಕ್ಷ ರ ಆಯ್ಕೆ ಸಾಧ್ಯ. ಈಗ ಲೆಕ್ಕಗಳ ಸ್ಥಾಯಿ ಸಮಿತಿಯಲ್ಲಿ 6 ಸದಸ್ಯರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಬಲಾಬಲ 3-3 ಆಗಿದೆ. ಹೀಗಿರುವಾಗ ಅಧ್ಯಕ್ಷರ ಆಯ್ಕೆ ಸಾಧ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net