

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅವಳಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳ ಓಡಾಟ ಇರಬಾರದು. ಮಾಲೀಕರು ತಮ್ಮ ನಿಯಂತ್ರಣದಲ್ಲಿ ಹಂದಿಗಳನ್ನು ಇಟ್ಟುಕೊಳ್ಳಬೇಕು. ಇದಕ್ಕೆ 3 ತಿಂಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಮಂಗಳವಾರ ಬಿಡಾಡಿ ಜಾನುವಾರುಗಳು ಹಾಗೂ ಹಂದಿಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆ, ವೃತ್ತ, ಆಟದ ಮೈದಾನ, ಮಾರುಕಟ್ಟೆ, ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳು ಮತ್ತು ಹಂದಿಗಳು ಕಾಣಿಸಿಕೊಳ್ಳುತ್ತಿದ್ದು ಪಾದಚಾರಿ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿವೆ. ಕೆಲವೆಡೆ ಬೆಳೆ ಹಾನಿಯಿಂದ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ ಎಂದರು.
ಈ ಹಿಂದೆ ಸಭೆ ಕರೆದು ಸಾರ್ವಜನಿಕ ಸ್ಥಳಗಳಲ್ಲಿ ಹಂದಿ ಹಾಗೂ ಬಿಡಾಡಿ ಜಾನುವಾರುಗಳನ್ನು ಬಿಡಬಾರದೆಂದು ಸೂಚಿಸಲಾಗಿತ್ತು. ಬಳಿಕ ಪತ್ರಿಕಾ ಪ್ರಕಟಣೆ ಸಹ ನೀಡಲಾಗಿದೆ. ಆದರೆ, ಹಂದಿಗಳ ಹಾವಳಿ ಬಗ್ಗೆ ಪಾಲಿಕೆಯ ಸಹಾಯವಾಣಿಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಹೇಳಿದರು.
15 ದಿನಗಳೊಳಗೆ ಹಂದಿಗಳನ್ನು ಸಾರ್ಜನಿಕ ಸ್ಥಳದಿಂದ ಬೇರೆಡೆ ಸಾಗಿಸಬೇಕೆಂದು ಮೊದಲು ಮೇಯರ್ ತಾಕೀತು ಮಾಡಿದ್ದರು. ಆದರೆ, ಸಭೆಯಲ್ಲಿದ್ದ ಹಂದಿಗಳ ಮಾಲೀಕರು 6 ತಿಂಗಳ ಕಾಲಾವಕಾಶ ಕೇಳಿದರು. ಕೊನೆಯಲ್ಲಿ 3 ತಿಂಗಳ ಗಡುವು ನೀಡಲಾಯಿತು. ಈ ಗಡುವು ಮುಗಿದ ಬಳಿಕ ಅವಳಿ ನಗರದಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಮೇಯರ್ ಸೂಚಿಸಿದರು.
ಬಿಡಾಡಿ ಜಾನುವಾರುಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಯಾರೂ ಹಾಜರಿರಲಿಲ್ಲ. ವಾರದಲ್ಲಿ ಬಿಡಾಡಿ ಜಾನುವಾರುಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸುವಂತೆ ಮೇಯರ್ ಸೂಚಿಸಿದರು. ಪಾಲಿಕೆಯವರು ಬಿಡಾಡಿ ಜಾನುವಾರುಗಳನ್ನು ಹಿಡಿದು ಅಮ್ಮಿನಭಾವಿಯಲ್ಲಿರುವ ಗೋಶಾಲೆಗೆ ತಂದು ಒಪ್ಪಿಸಿದರೆ ಅವುಗಳ ಆರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ವಿರೋಧ ಪಕ್ಷ ನಾಯಕ ರಾಜಶೇಖರ ಕಮತಿ, ಪಾಲಿಕೆ ಸದಸ್ಯರಾದ ಮೊಹಮ್ಮದ್ ಆರೀಫ್ ಭದ್ರಾಪುರ, ಸುವರ್ಣ ಕಲ್ಲಕುಂಟ್ಲ, ಇಕ್ಬಾಲ್ ನವಲೂರ, ಮಂಜುಳಾ ಜಾಧವ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯಕುಮಾರ, ಅಧಿಕಾರಿಗಳು ಇದ್ದರು.