

ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ನಿಂದ ಸಾಯಿನಗರ ವೃತ್ತ ಮತ್ತು ಉಣಕಲ್ ಚರ್ಚ್ವರೆಗೆ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಿಸಲಾದ ಒಟ್ಟು 55 ಆಸ್ತಿಗಳನ್ನು ಹು-ಧಾ ಮಹಾನಗರ ಪಾಲಿಕೆ ಶುಕ್ರವಾರ ವಶಕ್ಕೆ ಪಡೆಯಿತು.
22-23 ಮನೆಗಳು, 12 ಖಾಲಿ ಜಾಗ, 5-6 ಅಂಗಡಿಗಳು ಹಾಗೂ ಕಂಪೌಂಡ್ ಹಾಕಿದ ಆಸ್ತಿಗಳು ಇದ್ದವು. ಮನೆ, ಅಂಗಡಿ, ಇನ್ನಿತನ ನಿರ್ವಣಗಳನ್ನು ಪಾಲಿಕೆ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದರು. ತೆರವಿಗೆ ಕೆಲವರಿಂದ ವಿರೋಧ ವ್ಯಕ್ತವಾದರೂ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.
‘ಈ 55 ಆಸ್ತಿಗಳ ಮಾಲೀಕರಿಗೆ ಒಟ್ಟು 3.20 ಕೋಟಿ ರೂ. ಪರಿಹಾರ ವಿತರಿಸಿ 6 ತಿಂಗಳಿಗೂ ಹೆಚ್ಚು ಅವಧಿ ಕಳೆದಿವೆ. ಮನೆ, ಅಂಗಡಿ ತೆರವುಗೊಳಿಸುವಂತೆ ಹಲವು ಬಾರಿ ಗಡುವು ನೀಡಿದ್ದೇವು. ಕೆಲವರು ಈಗಾಗಲೇ ತೆರವುಗೊಳಿಸಿದ್ದರು. ಇಂದು ಕಾರ್ಯಾಚರಣೆ ನಡೆಸಿ ಭೂಸ್ವಾಧೀನಕ್ಕೆ ಒಳಪಟ್ಟು ಪರಿಹಾರ ವಿತರಿಸಲಾದ 55 ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆದಿದ್ದೇವೆ’ ಎಂದು ವಲಯ ಕಚೇರಿ ನಂ. 5ರ ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಕೆಂಭಾವಿ ತಿಳಿಸಿದ್ದಾರೆ.
ವಲಯ ಕಚೇರಿ ಸಹಾಯಕ ಆಯುಕ್ತ ಗಿರೀಶ ತಳವಾರ ಹಾಗೂ ಸಿಬ್ಬಂದಿ ಇದ್ದರು.