ಸದನ ಸಮಿತಿ ವರದಿ ಮಂಡನೆಗೆ ಸಿದ್ಧತೆ

hdmc
Published on

ಹುಬ್ಬಳ್ಳಿ: ಅವಳಿ ನಗರದ ಅಭಿವೃದ್ಧಿಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಬಯಸುವ ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಮಾನದಂಡ ರೂಪಿಸಿರುವ ಸದನ ಸಮಿತಿಯ ವರದಿಯು ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರಲಿದೆ. ವಾರ್ಡ್ ಸಮಿತಿ ರಚನೆಯು ಕಳೆದ 3 ವರ್ಷಗಳಿಂದ ಕಗ್ಗಂಟಾಗಿಯೇ ಉಳಿದಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಸೋಮವಾರ (ಮೇ 15) ತೆರವುಗೊಳ್ಳಲಿದ್ದು, ಇದರೊಂದಿಗೆ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತದ ಮೇಲಿದ್ದ ನಿಯಂತ್ರಣ ಕೊನೆಗೊಳ್ಳಲಿದೆ. ಚುನಾವಣೆ ಘೋಷಣೆಯಾಗಿದ್ದರಿಂದ ಏಪ್ರಿಲ್ ತಿಂಗಳ ಸಾಮಾನ್ಯ ಸಭೆ ನಡೆದಿರಲಿಲ್ಲ. ಇದೀಗ ಮೇ ತಿಂಗಳ ಸಾಮಾನ್ಯ ಸಭೆ 25 ಅಥವಾ 26ರಂದು ನಡೆಯಬಹುದು. ಹಾಲಿ ಮೇಯರ್ ಆಗಿರುವ ಈರೇಶ ಅಂಚಟಗೇರಿ ಅವರ ಕೊನೆಯ ಸಾಮಾನ್ಯ ಸಭೆಯೂ ಇದಾಗಿದೆ.
2022ರ ಆಗಸ್ಟ್‌ನಲ್ಲಿ ಮೇಯರ್ ಅಂಚಟಗೇರಿ ಅವರು ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಮಾನದಂಡ ರೂಪಿಸಲು ಪಾಲಿಕೆಯ ಹಿರಿಯ ಸದಸ್ಯ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿದ್ದರು. ಈ ಸಮಿತಿಯು ಮಾರ್ಚ್ ತಿಂಗಳಲ್ಲಿ ವರದಿ ಸಲ್ಲಿಸಿತ್ತು. ಈ ವರದಿಯನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಅದರ ಮೇಲೆ ಚರ್ಚೆ ನಡೆಸಿ ಅನುಮೋದನೆ ಪಡೆದು ದೃಢೀಕರಣಗೊಂಡ ಬಳಿಕ ಸರ್ಕಾರದ ಅನುಮೋದನೆಗೆ ಕಳುಹಿಸಬೇಕಾಗುತ್ತದೆ. ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕ ಬಳಿಕ ವಾರ್ಡ್ ಸಮಿತಿಗಳ ರಚನೆಗೆ ಅಣಿಯಾಗಬೇಕಿದೆ.

ಮಂಗಳೂರಿನಲ್ಲಿ ಕಾರ್ಯನಿರ್ವಹಣೆ

ಹು-ಧಾ ಮಹಾನಗರ ಪಾಲಿಕೆಯ 82 ವಾರ್ಡ್‌ಗಳ ಸಮಿತಿ ರಚನೆಗೆ ನಿಗದಿತ ಸದಸ್ಯ ಸ್ಥಾನಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದವು ಎಂಬ ಕಾರಣಕ್ಕೆ ಎಲ್ಲ ಅರ್ಜಿಗಳನ್ನು ತಿರಸ್ಕರಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಯಾವ ಪಕ್ಷದ ಸದಸ್ಯರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಎಲ್ಲ 60 ವಾರ್ಡ್ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲಿ ಪ್ರತಿ ವಾರ್ಡ್‌ನಲ್ಲಿ 10ಕ್ಕಿಂತ ಕಡಿಮೆ ಅರ್ಜಿಗಳು ಬಂದಿದ್ದರೂ ಸಮಿತಿ ರಚನೆಯಾಗಿದ್ದು, ಕಳೆದ 15 ತಿಂಗಳಿಂದ ಕಾರ್ಯನಿರ್ವಹಿಸುತ್ತಿದೆ. 11 ವಾರ್ಡ್ ಸಮಿತಿಗಳಲ್ಲಿ ಮಾತ್ರ ನಿಗದಿತ 10 ಜನ ಸದಸ್ಯರಿದ್ದಾರೆ. ಉಳಿದಂತೆ 20 ವಾರ್ಡ್ ಸಮಿತಿಗಳಲ್ಲಿ ತಲಾ 9, 16 ವಾರ್ಡ್ ಸಮಿತಿಗಳಲ್ಲಿ ತಲಾ 8, 6 ವಾರ್ಡ್ ಸಮಿತಿಗಳಲ್ಲಿ ತಲಾ 7, 4 ವಾರ್ಡ್ ಸಮಿತಿಗಳಲ್ಲಿ ತಲಾ 6, 5 ವಾರ್ಡ್ ಸಮಿತಿಗಳಲ್ಲಿ ತಲಾ 5 ಹಾಗೂ ಒಂದು ವಾರ್ಡ್ ಸಮಿತಿಯಲ್ಲಿ ನಾಲ್ವರು ಇದ್ದಾರೆ.
ಹು-ಧಾ ಮಹಾನಗರ ಪಾಲಿಕೆಯು 2021ರ ಆಗಸ್ಟ್‌ನಲ್ಲಿ ವಾರ್ಡ್ ಸಮಿತಿ ರಚನೆಗೆ ನಾಗರಿಕರಿಂದ ಅರ್ಜಿ ಆಹ್ವಾನಿಸಿತ್ತು. ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಹು-ಧಾ ವಾರ್ಡ್ ಸಮಿತಿ ಬಳಗದ ಅಧ್ಯಕ್ಷ ಲಿಂಗರಾಜ ಧಾರವಾಡಶೆಟ್ಟರ್ ಹಾಗೂ ಸದಸ್ಯರು ಹೋರಾಟ ನಡೆಸುತ್ತಿದ್ದಾರೆ.

ನೀತಿ ಸಂಹಿತೆ ತೆರವುಗೊಳ್ಳುತ್ತಿರುವುದರಿಂದ ಸೋಮವಾರ ಪಾಲಿಕೆ ಕಚೇರಿಗೆ ತೆರಳಿ ಈ ತಿಂಗಳ ಸಾಮಾನ್ಯ ಸಭೆಯ ದಿನಾಂಕ ನಿಗದಿಪಡಿಸುತ್ತೇವೆ. ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಸದನ ಸಮಿತಿಯ ವರದಿಯನ್ನು ಈ ಸಭೆಯಲ್ಲಿ ಮಂಡಿಸಲಾಗುವುದು. ಸರ್ವ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು.ಈರೇಶ ಅಂಚಟಗೇರಿ, ಮೇಯರ್, ಹು-ಧಾ ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net