

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯು ಕಾನೂನುಬಾಹಿರವಾಗಿ ಮುಂದುವರಿಸಿರುವ ಸ್ವಚ್ಛತೆ ಹೊರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಇಲ್ಲಿಯ ಗುತ್ತಿಗೆ ಪೌರ ಕಾರ್ವಿುಕರು ಶುಕ್ರವಾರ ಕೆಲಸ ಸ್ಥಗಿತಗೊಳಿಸಿ ಮುಂಗೈಗೆ ಕಪ್ಪು ಪಟ್ಟಿ ಧರಿಸಿ, ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಆರಂಭಿಸಿದರು.
ಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾರ್ವಿುಕರ ಮತ್ತು ನೌಕರಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಗುತ್ತಿಗೆ ಪೌರ ಕಾರ್ವಿುಕರು ಪ್ರತಿಭಟನೆ ನಿರತರಾಗಿದ್ದಾರೆ. ಸಂಜೆಯಾದರೂ ಪಾಲಿಕೆ ಅಧಿಕಾರಿಗಳು ಮಾತುಕತೆಗೆ ಬಾರದ ಹಿನ್ನೆಲೆಯಲ್ಲಿ ಶನಿವಾರವೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘ ತಿಳಿಸಿದೆ.
ರಾಜ್ಯ ಸರ್ಕಾರ 2017ರಲ್ಲಿಯೇ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಿ, ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಸಲು ಆದೇಶ ಹೊರಡಿಸಿತ್ತು. ಆದರೆ, ಹು-ಧಾ ಮಹಾನಗರ ಪಾಲಿಕೆಯಲ್ಲಿ ಇದು ಜಾರಿಗೆ ಬಂದಿಲ್ಲ. ಪಾಲಿಕೆಯ 799 ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ವೇತನ ಪಾವತಿಸುವಂತೆ ಹಾಗೂ ಖಾಲಿ ಉಳಿದಿರುವ 340 ಪೌರ ಕಾರ್ವಿುಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ ಸೆ. 30ರಂದು ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಬೇಕೆಂದು ಆಗ್ರಹಿಸಿದೆ.
ಕಾಯಂ ಪೌರ ಕಾರ್ವಿುಕರ ಸಂಘದ ಅಧ್ಯಕ್ಷ ಹೊನ್ನಪ್ಪ ದೇವಗೇರಿ, ರಮೇಶ ರಾಮಯ್ಯನವರ, ನಿಂಗಪ್ಪ ಮೊರಬದ, ಬಸಪ್ಪ ಮಾದರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಲಕ್ಷ್ಮೀ ಬೇತಾಪಲ್ಲಿ, ಇತರರು ಇದ್ದರು.