ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭ

pour kaarmika
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೇರ ಪಾವತಿ ಹಾಗೂ ಗುತ್ತಿಗೆ ಪೌರ ಕಾರ್ವಿುಕರು ಗುರುವಾರದಿಂದ ಕೆಲಸ ಸ್ತಗಿತಗೊಳಿಸಿ ಕಪ್ಪು ಪಟ್ಟಿ ಧರಿಸಿ ಇಲ್ಲಿಯ ಹು-ಧಾ ಮಹಾನಗರ ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ವಿುಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ರಾಮಪ್ಪ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ ಹಾಗೂ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ., ಡೆಂಘೆ ಹಿನ್ನೆಲೆಯಲ್ಲಿ ಸದ್ಯಕ್ಕೇ ಹೋರಾಟವನ್ನು ಕೈ ಬಿಡಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಆದರೆ, ನೇರ ಪಾವತಿ ಹಾಗೂ ಗುತ್ತಿಗೆ ಪೌರ ಕಾರ್ವಿುಕರು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದರು.

ಪೌರಕಾರ್ವಿುಕರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ 2017ರಲ್ಲಿ ಆದೇಶ ಹೊರಡಿಸಿದೆ. ಆದರೆ, 134 ಪೌರಕಾರ್ವಿುಕರ ಹುದ್ದೆಗಳನ್ನು ಕಾಯಂಗೊಳಿಸಿಲ್ಲ. ಈ ನಿಟ್ಟಿನಲ್ಲಿ ಹೋರಾಟ ನಡೆಸಿದ ಸುಮಾರು 200 ಪೌರಕಾರ್ವಿುಕರು ಮೃತಪಟ್ಟಿದ್ದಾರೆ ಹಾಗೂ 100 ಕ್ಕೂ ಹೆಚ್ಚು ಪೌರಕಾರ್ವಿುಕರು ನಿವೃತ್ತಿ ಹೊಂದಿ ಪಾಲಿಕೆಯಿಂದ ಯಾವುದೇ ಸೌಲಭ್ಯಇಲ್ಲದೇ ಬೀದಿ ಪಾಲಾಗಿದ್ದಾರೆ. ಕೂಡಲೇ ಇವರನ್ನು ನೇರ ನೇಮಕಾತಿ ಮಾಡಿಕೊಳ್ಳವೇಕು ಎಂದು ವಿಜಯ ಗುಂಟ್ರಾಳ ಆಗ್ರಹಿಸಿದರು.

ಪಾಲಿಕೆ ಸಾಮಾನ್ಯ ಸಭೆಯ ಠರಾವಿನಂತೆ 799 ಪೌರಕಾರ್ವಿುಕರಿಗೆ ನೇರ ವೇತನ ಪಾವತಿಸಬೇಕು. ಇದಕ್ಕೂ ಮಾನ್ಯತೆ ಇಲ್ಲದಾಗಿದೆ.

ಕನಿಷ್ಠ ವೇತನ ಬಾಕಿ 9 ಕೋಟಿ ರೂ., 868 ಮಹಿಳಾ ಪೌರಕಾರ್ವಿುಕರಿಗೆ ಮೆಡಿಕಲ್ ಬೋನಸ್ 21.70 ಲಕ್ಷ ರೂ., ಸರ್ಕಾರದ ಆದೇಶದಂತೆ ಪ್ರತಿ ತಿಂಗಳು 2000ರೂ. ಸಂಕಷ್ಟ ಬತ್ಯೆ, ನಿವೃತ್ತ/ಮೃತ ಪೌರಕಾರ್ವಿುಕರಿಗೆ 10 ಲಕ್ಷ ರೂ. ಪರಿಹಾರ, ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸಿದ್ದಾರೆ.

ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಯಲವ್ವ ನಾರಾಯಣಪುರ, ಶರಣಪ್ಪ ಅಮರಾವತಿ, ಕನಕಪ್ಪ ಕೋಟಬಾಗಿ, ಪುಲಯ್ಯಾ ಚಿಂಚಗೋಳ, ಭಾಗ್ಯಲಕ್ಷ್ಮೀ ಮಾದರ, ಯಲವ್ವ ದೇವರಗುಡಿಹಾಳ, ಪ್ರೇಮಾ ಕಣೆಕಲ್, ಅನಿತಾ ಇನಗೊಂಡ , ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net