

ಹುಬ್ಬಳ್ಳಿ: ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ನಿಂದ ಮುಕ್ತಾಯಗೊಂಡ ಹಾಗೂ ಜಂಟಿ ಪರಿಶೀಲನೆಯನ್ನು ಪೂರ್ಣಗೊಳಿಸಿರುವ ಕಾಮಗಾರಿಗಳನ್ನು ಹು-ಧಾ ಮಹಾನಗರ ಪಾಲಿಕೆಯ ಸುಪರ್ದಿಗೆ ಪಡೆಯಲು ನಿರ್ಧರಿಸಲಾಗಿದೆ.
ಸೋಮವಾರ ಕರೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಲೋಕಾಯುಕ್ತ ತನಿಖೆ ಕೈಗೊಂಡಿರುವ ಹಾಗೂ ಅಕ್ರಮಗಳು ನಡೆದಿರುವ ಬಗ್ಗೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದು ಉಲ್ಲೇಖಿಸಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ನ್ಯೂನ್ಯತೆಗಳು ಕಂಡು ಬಂದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಮೇಯರ್ ವೀಣಾ ಬರದಾ್ವಡ ಆದೇಶಿಸಿದರು.
ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಸ್ಮಾರ್ಟ್ ಸಿಟಿ ಯೋಜನೆಯಡಿ 63 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಸ್ಮಾರ್ಟ್ ಸ್ಕೂಲ್ (ಲ್ಯಾಮಿಂಗ್ಟರ್ ಶಾಲೆ), ಸ್ಮಾರ್ಟ್ ಹೆಲ್ತ್ ಕೇರ್ (ಚಿಟಗುಪ್ಪಿ ಆಸ್ಪತ್ರೆ) ಸೇರಿ ಪೂರ್ಣಗೊಂಡಿರುವ 15 ಕಾಮಗಾರಿಗಳನ್ನು ಈಗಾಗಲೇ ಪಾಲಿಕೆಗೆ ಹಸ್ತಾಂತರಿಸಿಕೊಂಡಿದ್ದೇವೆ. ಪೂರ್ಣಗೊಂಡಿರುವ 30 ಕಾಮಗಾರಿಗಳ ಬಗ್ಗೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಇಂಜಿನಿಯರ್ಗಳು ಜಂಟಿ ಪರಿಶೀಲನೆ ನಡೆಸಿದ್ದು 10 ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಬಹುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ (ದಕ್ಷಿಣ) ವರದಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿ ಲೆಕ್ಕದಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ಸಿನ ಮಯೂರ ಮೋರೆ ಆರೋಪಿಸಿದರು. ಗೋಕುಲ ರಸ್ತೆ ಕೇಶವ ಕುಂಜದ ಎದುರು ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಅಗಲೀಕರಣಕ್ಕೆ ಮನೆ ಕಳೆದುಕೊಂಡ 56 ಜನರಿಗೆ ಪರಿಹಾರ ಸಿಕ್ಕಿಲ್ಲ. ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂದು ಚೇತನ ಹಿರೇಕೆರೂರ ದೂರಿದರು.
ಸಭೆಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗೈರಾಗಿದ್ದರು. ಅಧಿಕಾರಿಗಳನ್ನು ಸಭೆಗೆ ಕರೆಯಿಸಬೇಕೆಂದು ಕೆಲ ಸದಸ್ಯರು ಪಟ್ಟು ಹಿಡಿದಿದ್ದರು.