ಜಿಐಎಸ್ ಸರ್ವೆಗೆ ಟೆಂಡರ್ ಕರೆಯಲು ನಿರ್ಧಾರ

GB JULY
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಿಧದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಹಾಗೂ ಪಾಲಿಕೆ ಒಡೆತನದ ಕಟ್ಟಡ, ಮಾರುಕಟ್ಟೆ ಸಂಕೀರ್ಣ, ಖಾಲಿ ಜಾಗ, ಭೂ ಬಾಡಿಗೆಯಿಂದ ನೀಡಿದ ಜಾಗ, ಉದ್ಯಾನ ಹಾಗೂ ಆಟದ ಮೈದಾನಗಳ ವಾಸ್ತವಿಕ ಸ್ಥಿತಿಯನ್ನು ಅರಿಯಲು ಭೌಗೋಳಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಐಎಸ್ (ಜಿಯೋಗ್ರಾಫಿಕ್ ಇನ್​ಫಾಮೇಶನ್ ಸಿಸ್ಟಮ್ ಸರ್ವೆ ನಡೆಸಲು ಪಾಲಿಕೆ ನಿರ್ಧರಿಸಿದೆ.

ಬುಧವಾರ ಕರೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಮೂರು ವಿಭಾಗ (ಹುಬ್ಬಳ್ಳಿ ಉತ್ತರ, ಹುಬ್ಬಳ್ಳಿ ದಕ್ಷಿಣ ಹಾಗೂ ಧಾರವಾಡ)ವಾರು ಟೆಂಡರ್ ಕರೆಯಲು ಅನುಮೋದನೆ ಪಡೆಯಲಾಯಿತು.

ಈ ಕುರಿತು ಸಭೆಯಲ್ಲಿ ಮಾತನಾಡಿದ ಸಭಾನಾಯಕ ವೀರಣ್ಣ ಸವಡಿ, ಬಹಳಷ್ಟು ಜನರು ಆಸ್ತಿಯ ತೆರಿಗೆ ಮೌಲ್ಯ ನಿಖರವಾಗಿ 5 ಸಾವಿರ ಇದ್ದಲ್ಲಿ 3 ಸಾವಿರ ರೂ. ಪಾವತಿಸಿದ್ದಾರೆ. ಜಿಐಎಸ್ ಸರ್ವೆಯಿಂದ ಇಂಥ ಲೋಪಗಳು ಬೆಳಕಿಗೆ ಬರಲಿವೆ. ಪಾಲಿಕೆಗೆ ಹೆಚ್ಚಿನ ಆದಾಯ ಬಂದಲ್ಲಿ ಮಾತ್ರ ನಾವು (ಸದಸ್ಯರು) ನಮ್ಮ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸಬಹುದು. ಜಿಐಎಸ್ ಸರ್ವೆ ಕೈಗೊಳ್ಳಲು 2 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, 6 ತಿಂಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ನಡೆಸಿದ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಐಎಸ್ ಸರ್ವೆ ಬಗ್ಗೆ ಪ್ರಸ್ತಾಪಿಸಿ ಈ ಕುರಿತು ಸಾಮಾನ್ಯ ಸಭೆ ಕೈಗೊಳ್ಳುವ ನಿರ್ಣಯಕ್ಕೆ ತಮ್ಮ ಒಪ್ಪಿಗೆ ಇರುತ್ತದೆಂದು ಸ್ಪಷ್ಟಪಡಿಸಿದ್ದಾರೆ. ಕಾಲಮಿತಿಯಲ್ಲಿ ಅವಳಿ ನಗರದ ಜಿಐಎಸ್ ಸರ್ವೆ ಕೈಗೊಳ್ಳಬೇಕು ಎಂದು ಮೇಯರ್ ರಾಮಪ್ಪ ಬಡಿಗೇರ ರೂಲಿಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net