

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಿರಂತರ ನೀರು ಪೂರೈಕೆ ಯೋಜನೆ, ಭೂ ಬಾಡಿಗೆ (ಲೀಸ್) ಮೇಲೆ ನೀಡಿದ ಪಾಲಿಕೆಯ ಆಸ್ತಿ, ಎಲ್ಇಡಿ ಬೀದಿ ದೀಪ ಅಳವಡಿಕೆಯ ಯೋಜನೆ, ಇನ್ನಿತರ ವಿಷಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಲ್ಲಿ ಎಡವಿದ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರು ಸೇರಿ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತೀವ್ರ ತರಾಟೆಗೆ ತೆಗೆದುಕೊಂಡರು.
ಇಲ್ಲಿಯ ಐಟಿ ಪಾರ್ಕ್ ಕಟ್ಟಡದಲ್ಲಿರುವ ಕೆಯುಐಡಿಎಫ್ಸಿ ಕಚೇರಿಯಲ್ಲಿ ಸಚಿವರು ಮಂಗಳವಾರ ಹು-ಧಾ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ಗೆ ಬಳಕೆಯಾಗುವ ಡಿಸೇಲ್ ವೆಚ್ಚ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ ಸೇರಿದ ಅಂಗವಿಕಲರ ಸಂಖ್ಯೆ, ಪಾಲಿಕೆ ಒಡೆತನದ ಆಸ್ತಿ, ಭೂ ಬಾಡಿಗೆ ನೀಡಿದ ಆಸ್ತಿಯ ಒಟ್ಟು ವಿವರ, ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾದರು.
ಇದರಿಂದ ಸಿಟ್ಟಾದ ಸಚಿವ ಲಾಡ್ ‘ನೀವೆಲ್ಲ ಉನ್ನತ ವಿದ್ಯಾರ್ಹತೆ ಹೊಂದಿದ್ದೀರಿ. ಮೇಲಾಗಿ ರಾಜಕಾರಣಿಗಳು ಓದಿಕೊಂಡು ಇರುವುದಿಲ್ಲ ಎಂದು ವ್ಯಾಖ್ಯಾನ ಮಾಡುತ್ತೀರಿ. ಆದರೆ, ಇಲ್ಲಿ ನೋಡಿದರೆ ನಿಮಗೆ ಗ್ರಾಪಂ ಮಟ್ಟದ ಅಧಿಕಾರಿಗಳಷ್ಟು ಬುದ್ಧಿಮಟ್ಟವಿಲ್ಲವೆಂದು ನನಗೆ ಅನಿಸುತ್ತಿದೆ. ಬುದ್ಧಿಮತ್ತೆಯನ್ನು ಉಪಯೋಗಿಸದಿದ್ದರೆ ನಗರವನ್ನು ಹೇಗೆ ಅಭಿವೃದ್ಧಿ ಪಡಿಸುತ್ತೀರಿ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಗಸ್ಟ್ 20ರಂದು ಮತ್ತೊಮ್ಮೆ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು. ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದರು.