

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೌಕರ ಶಂಕರ ಕುಡ್ಲಣ್ಣವರ ಎಂಬುವವರು ಸಾಮಾಜಿಕ ಜಾಲತಾಣ-ವಾಟ್ಸ್ಆಪ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ಸಂದೇಶ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾರೆ.
ವಾಟ್ಸ್ಆಪ್ನಲ್ಲಿ ಸೃಷ್ಟಿಸಲಾಗಿರುವ ಎಚ್ಡಿಎಂಸಿ ಯೂನಿಯನ್ ಎಂಬ ಗ್ರುಪ್ನಲ್ಲಿ ಈ ಸಂದೇಶ (ಫಾರ್ವರ್ಡೆಡ್) ಹಾಕಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜ. 22ರಂದು ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶಿಸಿದೆ. ಇದರರ್ಥ ಹುಂಡಿಯಲ್ಲಿ ಅಧಿಕ ಹಣ ಸೇರಬೇಕು ಎಂದು, ಆ ಹಣವನ್ನು ಲೋಕಸಭೆ ಚುನಾವಣೆಗೆ ಬಳಸಿಕೊಳ್ಳುವ, ಆದಷ್ಟು ಜೇಬು ಸೇರಿಸಿಕೊಳ್ಳುವ ಮತ್ತು ಸ್ವಲ್ಪವನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿಕೊಳ್ಳುವ ತಂತ್ರ ಇದಾಗಿದೆ ಎಂದು ಸಂದೇಶದಲ್ಲಿ ಹೀಯಾಳಿಸಲಾಗಿದೆ.
ಈ ದರಿದ್ರ ಸರ್ಕಾರದ ತಂತ್ರಕ್ಕೆ ಬಲಿಯಾಗಬೇಡಿ ಹಿಂದುಗಳೇ. ಜ. 22ರಂದು ದೇವಸ್ಥಾನಕ್ಕೆ ಹೋಗಿ, ಆದರೆ ಹುಂಡಿಯಲ್ಲಿ ಹಣ ಹಾಕಬೇಡಿ. ಮನೆಯಲ್ಲಿ ಒಂದು ಹುಂಡಿ ಇಟ್ಟು, ಅದರಲ್ಲಿ ಹಣ ಹಾಕಿ ಮತ್ತು ತುಂಬಿದ ಮೇಲೆ ಅನಾಥ ಮಕ್ಕಳಿಗೆ ಬಟ್ಟೆ, ಊಟ ಕೊಡಿಸಿ. ಧರ್ಮವನ್ನು ರಕ್ಷಣೆ ಮಾಡಿ. ಮೋಸದ ಆಟಕ್ಕೆ ಮರುಳಾಗಬೇಡಿ. ಜೈ ಶ್ರೀರಾಮ್ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
‘ವಿಷಯ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು. ಬಳಿಕ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.