ಎಚ್ ಡಿಕೆ ಮಗುವಿನ ತರಹ, ಅವರದ್ದು ಚಾಕೊಲೇಟ್ ಕೊಟ್ಟವರ ಕಡೆಗೆ ಹೋಗುವ ಬುದ್ದಿ

IMG-20250404-WA0048.jpg
Published on

ಚಿಕ್ಕಬಳ್ಳಾಪುರ: ಜೆಡಿಎಸ್ ಮೊದಲಿನಿಂದಲೂ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದೆ. ಸದಾ ಅಧಿಕಾರ ಬಯಸುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಗುವಿನ ಮಾದರಿಯಲ್ಲಿ ಚಾಕ್ಲೇಟ್ ಕೊಡುವವರ ಕಡೆ ಇರುತ್ತಾರೆ ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಜಂಗಮಾರಪ್ಪನಹಳ್ಳಿಯಲ್ಲಿ ಕೈಗೊಂಡಿದ್ದ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಎಲ್ಲ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಹಿಂದಿನ ರಾಜಕೀಯ ಬೆಳವಣಿಗೆಗಳೇ ನಿದರ್ಶನ. ಈಗ ಕೇಂದ್ರ ಸರ್ಕಾರಕ್ಕೆ ಬೆಂಬಲವನ್ನು ನೀಡಿ, ಎಚ್.ಡಿ.ಕುಮಾರಸ್ವಾಮಿ ಸಚಿವರಾಗಿದ್ದಾರೆ. ಈಗಲೂ ಹೇಗೋ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಇದೊಂದು ರೀತಿಯಲ್ಲಿ ಚಾಕ್ಲೇಟ್ ಕೊಟ್ಟವರ ಕಡೆಗೆ ಮಗು ಹೋಗುವಂತಹುದರ ನಡೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಇದನ್ನರಿತುಕೊಂಡು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಹಲವು ಸವಲತ್ತುಗಳನ್ನು ಒದಗಿಸಲಾಗಿದೆ. ಇದರಿಂದ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ. ಆದರೆ, ರಾಜ್ಯ ಬಿಜೆಪಿ ನಾಯಕರು ರಾಜಕಾರಣಕ್ಕಾಗಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಅವರಿಗೆ ತಾಕತ್ ಇದ್ದಲ್ಲಿ ಮೊದಲು ಕೇಂದ್ರ ಸರ್ಕಾರದ ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಲು ಒತ್ತಡ ಹೇರಲಿ, ಹಾಗೆಯೇ ರಾಜ್ಯಕ್ಕೆ ಸಿಗಬೇಕಾದ ಜಿಎಸ್ಟಿ ಪಾಲಿನ ಹಣವನ್ನು ಕೊಡಿಸಲಿ, ಬಾಕಿ ಉಳಿದಿರುವ ವಿವಿಧ ಯೋಜನೆಗಳ ಅನುದಾನವನ್ನು ಬಿಡುಗಡೆಗೊಳಿಸಲಿ, ಇದನ್ನು ಬಿಟ್ಟು ಧರಣಿ ನಡೆಸುವುದರಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
ಅಹಿಂದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಆಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಅಕ್ರಮ ಹಣ ಸಂಪಾದಿಸಿಲ್ಲ. ಇದನ್ನು ಸಹಿಸದೇ ತನಿಖಾ ಸಂಸ್ಥೆಗಳ ಮೂಲಕ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಸಾಕಷ್ಟು ಆರೋಪಗಳು ಇವೆ. ಇದಕ್ಕೆ ಮೊದಲು ಅವರು ಕ್ಲೀನ್ ಚಿಟ್ ಪಡೆಯಲಿ, ಉನ್ನತ ಮಟ್ಟದ ತನಿಖೆಗೊಳಪಡಲಿ ಎಂದು ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net