

ಮಂಡ್ಯ: ನಾನು ಜ್ಯೋತಿಷ್ಯಗಾರನಲ್ಲ, ಆದರೂ ಹೇಳುತ್ತಿದ್ದೇನೆ 2028ರವರೆಗೆ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇರಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಜನರು ಒಂದು ಅವಕಾಶ ನೀಡುತ್ತಾರೆನ್ನುವ ವಿಶ್ವಾಸ ಇದೆ. 2028ರ ಅವಧಿಯೊಳಗೆ ಅವಕಾಶ ಬರಲಿದೆ. ಜನ ಬಯಸಿದರೆ ಏಕೆ ಆಗಬಾರದು. ನನಗೆ ಐದು ವರ್ಷದ ಸರ್ಕಾರ ಕೊಡಿ ಎಂದು ಜನರಿಗೆ ಈಗಲೂ ಮನವಿ ಮಾಡುತ್ತೇನೆ ಎಂದರು.
ಬೇರೆಯವರ ಹಂಗಿನಲ್ಲಿ ನನ್ನ 14 ತಿಂಗಳ ಆಡಳಿತ ಮಾಡಿದ್ದೆ. ಈಗಿನ ಸಂಪೂರ್ಣ ಬಹುಮತದ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲು, ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. ನನಗೆ ಆಗಿರುವ ಅನುಭವದಲ್ಲಿ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕರ್ನಾಟಕ ಸಮೃದ್ಧಿಯ ನಾಡು. ಒಂದು ಅವಕಾಶ ಕೊಟ್ಟರೆ ಕುಟುಂಬಗಳು ತಮ್ಮ ಬದುಕಿಗೆ ಕೈ ಚಾಚಾಬಾರದು. ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವಂತೆ ಮಾಡಬಹುದಾದ ರಾಜ್ಯ ನಮ್ಮದು ಎಂದರು.
ಆದರೆ ಇಂದು ಹಣದ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಕೊಡುವ 2 ಸಾವಿರ ರೂ ಅಲ್ಲ, ಕನಿಷ್ಟ 10 ಸಾವಿರ ರೂ ಸಂಪಾದನೆ ಮಾಡುವ ಕಾರ್ಯಕ್ರಮಗಳು ಇವೆ. ರಾಜ್ಯಸರ್ಕಾರದ ನಡವಳಿಕೆಗೆ ಜನರು ಬೇಸತ್ತಿದ್ದಾರೆ. ಜನರಲ್ಲಿ ಸರ್ಕಾರದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ಆದ್ದರಿಂದ ಜನರೇ ಈ ಸರ್ಕಾರವನ್ನು ತೆಗೆಯುತ್ತಾರೆ. ನಾವು ತೆಗೆಯಲು ಸಾಧ್ಯವಿಲ್ಲ, ಜನರೇ ತೀರ್ಮಾನ ಮಾಡಬೇಕು ಎಂದ ಅವರು, ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಇದೆ. ಯಾವಾಗ ಸ್ಫೋಟ ಆಗಲಿದೆ ಎನ್ನುವುದನ್ನು ಕಾದು ನೋಡೋಣಾ. ನಾವು ಅವರ ಸರ್ಕಾರ ಅಲ್ಲಾಡಿಸುತ್ತೇವೆಂದು ಹೇಳಿಲ್ಲ. ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಶಾಸಕರು ಹಳ್ಳಿಗೆ ಹೋಗಿ ಜನರನ್ನ ಭೇಟಿ ಮಾಡದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.