

ಹಾಸನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಿಯ ಕೃಪೆ ಎಲ್ಲರ ಮೇಲೂ ಇರಲಿ. ಜಿಲ್ಲಾಡಳಿತ ಶಿಸ್ತುಬದ್ಧವಾಗಿ ದರ್ಶನ ವ್ಯವಸ್ಥೆ ಮಾಡಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಆಡಳಿತ ವರ್ಗ ಉತ್ತಮ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಸಿಎಂ, ಡಿಸಿಎಂ ಹಾಗೂ ಹಲವು ಸಚಿವರು ದೇವಿ ದರ್ಶನ ಮಾಡಿದ್ದಾರೆ. ಆದರೆ, ನಾಡಿನ ಜನತೆ ಬಗ್ಗೆ ಅವರ ಮಾತುಗಳಲ್ಲಿ ಬದ್ಧತೆ ಇರಲಿ. ಅವರು ಹೇಳಿದ ಘೋಷಣೆಗಳು ಕೃತಿಯಾಗಿ ಜಾರಿಯಾಗಲಿ. ದೇವಿ ಅವರಿಗೆ ಸದ್ಬುದ್ಧಿ ನೀಡಲಿ ಎಂದು ಹೇಳಿದರು.
ಮಳೆ ಚೆನ್ನಾಗಿ ಆಗಿದ್ದರೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು. ಸರ್ಕಾರದ ಹೇಳಿಕೆಗಳು ಕೇವಲ ಘೋಷಣೆಗಳಾಗಿ ಉಳಿಯದೆ, ರೈತರಿಗೆ ನೈಜ ಪರಿಹಾರ ನೀಡಬೇಕು ಎಂದು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ, ಕೃಷ್ಣಪ್ಪ, ಶರಣಪ್ರಕಾಶ್ ಕುಂದಕೂರ, ಜಿ.ಡಿ.ಹರೀಶ್‌ಗೌಡ, ಸ್ವರೂಪ್ ಪ್ರಕಾಶ್, ಸುರೇಶ್‌ಬಾಬು, ಶಾರದಾ ನಾಯಕ್, ಬಿಜೆಪಿ ಶಾಸಕ ಧೀರಜ್ ಮುನಿಸ್ವಾಮಿ, ಕೆ.ಸಿ.ರಾಮಸ್ವಾಮಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಮುದ್ದಹಮೇಗೌಡ ಇದ್ದರು.
ವಿವಿಧ ಕ್ಷೇತ್ರದ ಗಣ್ಯರು, ಶಾಸಕರು, ನ್ಯಾಯಾಧೀಶರು, ಚಲನಚಿತ್ರ ನಟರು, ಹಿರಿಯ ಅಧಿಕಾರಿಗಳು, ಲೋಕಾಯುಕ್ತ ನ್ಯಾಯಮೂರ್ತಿಗಳು ಶುಕ್ರವಾರ ದರ್ಶನ ಪಡೆದರು.