

ಮಂಡ್ಯ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಭದ್ರವಾಗಿದೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಮನ್ವಯ ಸಮಿತಿ ರಚನೆ ಆಗಬೇಕೆಂದು ಡಿ.ವಿ.ಸದಾನಂದಗೌಡರೇ ಹೇಳಿದ್ದಾರೆ. ಹಲವಾರು ಹಿರಿಯ ನಾಯಕರೂ ಸಮನ್ವಯ ಸಮಿತಿ ಆಗಬೇಕು ಎಂದು ಸಲಹೆ ಮಾಡಿದ್ದಾರೆ. ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷ ಗಟ್ಟಿಗೊಳಿಸಲು ಹೋರಾಟ ಮಾಡುತ್ತಿದ್ದಾರೆ. ನಮ್ಮನ್ನು ಅವರು ಕರೆದಿಲ್ಲ. ಇದು ನಮ್ಮ ಪಕ್ಷದ ಕಾರ್ಯಕ್ರಮ ಎಂದು ಅವರೇ ಹೇಳಿದ್ದಾರೆ. ರಾಜ್ಯಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಮೈತ್ರಿಯಲ್ಲಿ ಯಾವ ಬಿರುಕು ಇಲ್ಲ, ಎಲ್ಲರೂ ಭದ್ರವಾಗಿ ಇದ್ದೇವೆ. ಸಂಘಟನೆ ವಿಚಾರದಲ್ಲಿ ಆಯಾ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.