

ಹಲಗೂರು: ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವುದರ ಮೂಲಕ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ತಿನ್ನಿಸುವುದರ ಮುಖಾಂತರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.
ನಂತರ ಮಾತನಾಡಿದ ಕೆ.ಅನ್ನದಾನಿ, ಹಲಗೂರು ಹೋಬಳಿಯ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರು, ಎಚ್.ಡಿ . ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು, ಪಕ್ಷದ ಹಿರಿಯ ಮುಖಂಡರು ಸೇರಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ಯವರ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್ ಕಾರ್ಖಾನೆಗಳ ಸಚಿವರಾಗಿದ್ದಾರೆ. ಮಂಡ್ಯ ಜಿಲ್ಲೆಯ ಸಂಸತ್ ಸದಸ್ಯರಾಗಿ ದೇಶದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಇದು ನಮಗೆಲ್ಲ ಹೆಮ್ಮೆಯ ವಿಷಯ. ದೇವರು ಅವರಿಗೆ ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಲಿ ಎಂದು ಪ್ರೀತಿಯಿಂದ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಮುಖಂಡರಾದ ಎಚ್.ಎನ್.ರಾಮಚಂದ್ರೇಗೌಡ, ಸುರೇಂದ್ರ, ಸೋಮಶೇಖರ್, ತಮ್ಮಣ್ಣಗೌಡ, ಸುರೇಶ, ಸದಾಶಿವ, ಎಚ್. ಆರ್.ವಿಶ್ವ, ರವಿ ಮೋದಿ, ರವೀಶ, ಶಿವಕುಮಾರ್, ಬಾಬು ಸೇರಿದಂತೆ ಇತರರು ಇದ್ದರು.