ಎಚ್ಡಿಕೆ ಸಿಎಂ, ನಿಖಿಲ್ ಸಂಸದರಾಗೋವರೆಗೂ ಚಪ್ಪಲಿ ಹಾಕಲ್ಲ: ಜೆಡಿಎಸ್ ಅಭಿಮಾನಿಯ ವಿಶೇಷ ಶಪಥ

Jds
Published on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಮಂಡ್ಯದ ಸಂಸದರಾಗಬೇಕು. ಅಲ್ಲಿವರೆಗೆ ಪಾದರಕ್ಷೆ ಹಾಕುವುದಿಲ್ಲವೆಂದು ಜೆಡಿಎಸ್ ಅಪ್ಪಟ ಅಭಿಮಾನಿಯೊಬ್ಬ ಶಪಥ ಮಾಡಿದ್ದಾನೆ.

ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಪವನ್‌ಕುಮಾರ್ ಈ ರೀತಿ ಪ್ರತಿಜ್ಞೆ ತೊಟ್ಟವನು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಈತ ಕೆಲ ತಿಂಗಳಿಂದ ಬರಿಗಾಲಿನಲ್ಲಿ ನಡೆಯುತ್ತಿದ್ದಾನೆ. ಅಲ್ಲದೇ, ಎದೆಯ ಎಡಭಾಗದಲ್ಲಿ ನಿಖಿಲ್ ಕುಮಾರಸ್ವಾಮಿ, ಬಲಗೈ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾನೆ. ಪವನ್‌ಕುಮಾರ್‌ನನ್ನು ಯಾರಾದರೂ ಮಾತಿಗೆಳೆದರೆ ಕುಮಾರಸ್ವಾಮಿ, ನಿಖಿಲ್‌ಕುಮಾರಸ್ವಾಮಿ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದ ಪ್ರತಿ ವರ್ಗಕ್ಕೂ ಅನುಕೂಲ ಕಲ್ಪಿಸಿದ್ದಾರೆ. ಇವರಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ತಾಯಿ ಹೃದಯ ಇರುವ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎನ್ನುತ್ತಾನೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ನಿಖಿಲ್‌ಕುಮಾರಸ್ವಾಮಿ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಅಲ್ಲಿ ಹೋಗಿ ಅಭಿಮಾನ, ಪಕ್ಷ ನಿಷ್ಠೆ ತೋರುತ್ತಾನೆ. ಯಾವುದೇ ಸ್ಥಾನಮಾನ ಬಯಸದೆ ಕೇವಲ ಅಭಿಮಾನದಿಂದ ಪಕ್ಷಕ್ಕಾಗಿ ದುಡಿಯುವ ಈತನನ್ನು ಕಂಡರೆ ಕಾರ್ಯಕರ್ತರು ಹಾಗೂ ಮುಖಂಡರಿಗೂ ಅಚ್ಚುಮೆಚ್ಚು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು, ನಿಖಿಲ್ ಕುಮಾರಸ್ವಾಮಿ ಸಂಸದರಾಗಬೇಕು, ಅಲ್ಲಿಯವರೆಗೆ ನಾನು ಪಾದರಕ್ಷೆ ಹಾಕುವುದಿಲ್ಲ. ಇದು ನನ್ನ ಶಪಥ. ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಇವರಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎನ್ನುತ್ತಿದ್ದಾನೆ ಪವನ್‌ಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net